ನಾನು ಓಡಾಡೋ ರೋಡಲ್ಲಿ ಯಾರೆ ಬಂದ್ರೂ ನಾನೇ ಟ್ಯಾಕ್ಸ್ ಅಫೀಸರ್..ಇಲ್ಲಿ ನಂದೇ ಹವಾ… ನೀವು ಈ ರಸ್ತೆಯಲ್ಲಿ ಓಡಾಡಬೇಕಾದ್ರೆ ಪುಡ್ ಟ್ಯಾಕ್ಸ್ ಕೊಡಲೇಬೇಕು….ಇಲ್ಲಾಂದ್ರೆ ನೀವೂ ರಸ್ತೆಯಲ್ಲಿ ಓಡಾಡಲು ನಾನು ಬಿಡೋನೆ ಅಲ್ಲ ಈ ಬಂಡೀಪುರದ ಫುಡ್ ಟ್ಯಾಕ್ಸ್ ಆಫೀಸರ್ ….ಎಂದು ಆವಾಜ್ ಆಗ್ತಾ ಇದಾನೆ ಈ ಬಂಡೀಪುರದ ಡಾನ್.. ಈ ವೀರನ ಕ್ವಾಟ್ಲೆಗೆ ಊಟಿಗೆ ಪಯಣ ಮಾಡುವ ಪ್ರಯಾಣಿಕರು ಸಾಕಾಪ್ಪ ಸಾಕು ಈ ಆಫೀಸರನ್ನ ಎತ್ತಂಗಡಿ ಮಾಡಿ ಎಂದು ಗೋಳಾಡ್ತಾ ಇದಾರೆ. ಹಾಗಾದ್ರೆ ಬಂಡೀಪುರದಲ್ಲಿ ರೋಡಿನಲ್ಲಿ ನಿಲ್ಲೋ ಆ ಫುಡ್ ಟ್ಯಾಕ್ಸ್ ಆಫೀಸರ್ ಯಾರೂ ಅಂತೀರಾ ನೋಡಿ ಈ ಸ್ಟೋಡೀನಾ.
ನಿತ್ಯ ಇಂತಹ ದೃಶ್ಯಗಳಿಗೆ ಸಾಕ್ಷಿಯಾಗುತ್ತಿದೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ಬಂಡೀಪುರ ಮಾರ್ಗ ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ. ಹೌದು ಕಾಡಿನ ನಡುವೆ ಹಾದು ಹೋಗುವ ಈ ಹೆದ್ದಾರಿಯಲ್ಲಿ ಬಂಡೀಪುರದ ಫುಡ್ ಟ್ಯಾಕ್ಸ್ ಆಫೀಸರ್ ಕಾಟ ಹೇಳತೀರದಾಗಿದೆ. ಆ ಕಾಡ ಕೊಡೋನೆ ಇಲ್ಲಿರುವ ಒಂಟಿ ಸಲಗ..
ಪ್ರತಿನಿತ್ಯ ಸಂಜೆ ನಂತರ ಈ ರಸ್ತೆಗೆ ಬರುವ ಭಾರೀ ಗಾತ್ರದ ಈ ಗಜರಾಜ ವಾಹನಗಳನ್ನು ಅಡ್ಡ ಹಾಕುವುದನ್ನು ರೂಢಿ ಮಾಡಿಕೊಂಡಿದೆ. ಬೆಲ್ಲ, ತರಕಾರಿ, ಹಣ್ಣು ಮತ್ತಿತರ ಆಹಾರ ಪದಾರ್ಥಗಳನ್ನು ತುಂಬಿರುವ ವಾಹನಗಳನ್ನು ಕಂಡರಂತು ಇದಕ್ಕೆ ಹಬ್ಬವೋ ಹಬ್ಬ. ಅಂತಹ ವಾಹನಗಳನ್ನು ಅಡ್ಡಗಟ್ಟಿ ಟಾರ್ಪಲ್ ಕಿತ್ತು, ಹೊಟ್ಟೆ ಬಿರಿಯೋ ತನಕ ತಿನ್ನದೆ ಬಿಡೋದೆ ಇಲ್ಲ. ಚಾಲಕರೇನದ್ರೂ ನಖರಾ ಮಾಡಿ ವಾಹನ ಚಲಾಯಿಸಲು ಮುಂದಾದ್ರೆ ಅಂತಹ ವಾಹನಗಳನ್ನು ಅಟ್ಯಾಕ್ ಮಾಡಲು ಮುಂದಾಗುತ್ತಾನೆ ಈ ಬಂಡೀಪುರದ ಒಂಟಿ ಸಲಗ .
ಬಂಡೀಪುರ ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳಿರುವ ತಾಣ. ಗುಂಡ್ಲುಪೇಟೆಯಿಂದ ಬಂಡೀಪುರ ಮಾರ್ಗವಾಗಿ ತಮಿಳುನಾಡು ಹಾಗು ಕೇರಳ ರಾಜ್ಯಗಳಿಗೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. ಹೆದ್ದಾರಿ ಬದಿಯಲ್ಲಿ ಆನೆಗಳು ಸೇರಿದಂತೆ ಇತರ ವನ್ಯಪ್ರಾಣಿ ಗಳು ತಮ್ಮ ಪಾಡಿಗೆ ಮೇಯುತ್ತಾ ಅಡ್ಡಾಡುವುದು ಇಲ್ಲಿ ಸಾಮಾನ್ಯ. ಆದರೆ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಈ ಒಂಟಿ ಸಲಗ ಸಂಜೆಯಾಗುತ್ತಿದ್ದಂತೆ ನೇರ ರಸ್ತೆ ಮಧ್ಯೆ ಬಂದು ನಿಂತು ಬಿಡುತ್ತದೆ. ಇದರಿಂದ ಕಾಡಿನ ರಸ್ತೆಯಲ್ಲಿ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತದೆ. ಕೆಲವೊಮ್ಮೆ ವಾಹನಗಳ ಮೇಲೆ ಅಟ್ಯಾಕ್ ಮಾಡಲು ಬರುವ ಈ ಒಂಟಿ ಸಲಗ ರೆಗ್ಯುಲರ್ ಆಗಿ ಸಂಚರಿಸುವ ವಾಹನಸವಾರರಲ್ಲಿ ಆತಂಕ ಸೃಷ್ಟಿಸಿದೆ.
ಕಳೆದ ಒಂದು ತಿಂಗಳಿಂದ ಈ ಗಜರಾಜನ ಉಪಟಳ ಮೇರೆ ಮೀರಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ದೊಡ್ಡ ಅನಾಹುತ ಆಗುವ ಮೊದಲೇ ಅರಣ್ಯ ಇಲಾಖೆ ಎಚ್ಚೆತ್ತು ಕೊಳ್ಳಬೇಕಿದೆ ಈ ಹೆದ್ದಾರಿಯಲ್ಲಿ ಅರಣ್ಯ ಸಿಬ್ಬಂದಿಯ ಗಸ್ತು ಹೆಚ್ಚಿಸುವ ಮೂಲಕ ಒಂಟಿ ಸಲಗದ ಉಪಟಳಕ್ಕೆ ಕಡಿವಾಣ ಹಾಕಬೇಕಿದೆ.