ಮಲಯಾಳಂ ಚಿತ್ರರಂಗದ ಖ್ಯಾತ ನಟ ಹಾಗೂ ಸಿಪಿಎಂ ಶಾಸಕ ಎಂ. ಮುಖೇಶ್ ವಿರುದ್ಧ ಜ್ಯೂನಿಯರ್ ಆರ್ಟಿಸ್ಟ್ ಲೈಂಗಿಕ ಕಿರುಕುಳ ಪ್ರಕರಣದ ದಾಖಲಿಸಿದ್ದರು. ಇದೀಗ ವಿಶೇಷ ತನಿಖಾ ತಂಡ (ಎಸ್ಐಟಿ) ಆರೋಪ ಪಟ್ಟಿ ಸಲ್ಲಿಸಿದೆ. ಎರ್ನಾಕುಲಂ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮುಖೇಶ್ ವಿರುದ್ಧ ಡಿಜಿಟಲ್ ಸಾಕ್ಷ್ಯಗಳಿವೆ ಎಂದು ಹೇಳಲಾಗಿದೆ.
ಮುಕೇಶ್ ಮತ್ತು ಜೂನಿಯರ್ ಆರ್ಟಿಸ್ಟ್ ನಡುವಿನ ವಾಟ್ಸಾಪ್ ಚಾಟ್ಗಳು ಮತ್ತು ಇಮೇಲ್ ಸಂದೇಶಗಳನ್ನು ಸಾಕ್ಷ್ಯವಾಗಿ ಸಲ್ಲಿಸಲಾಗಿದೆ. ಸಾಂದರ್ಭಿಕ ಪುರಾವೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸ್ವೀಕರಿಸಲಾಗಿದೆ ಎಂದು ಎಸ್ಐಟಿ ಹೇಳಿದೆ. ಮುಕೇಶ್ ವಿರುದ್ಧ ಕಿರುಕುಳದ ಜೊತೆಗೆ ಲೈಂಗಿಕ ದೌರ್ಜನ್ಯದ ಆರೋಪವನ್ನೂ ಹೊರಿಸಲಾಗಿದೆ.
ಮಲೆಯಾಳಂ ಚಿತ್ರನಟ-ನಟಿಯರ ಸಂಘಟನೆ ಅಮ್ಮಾದ ಸದಸ್ಯತ್ವದ ಭರವಸೆ ನೀಡಿ ತನಗೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ನಟಿ ಮಿನು ಮುನೀರ್ ಆರೋಪಿಸಿದ್ದಾರೆ.
ಎಂ. ಮುಖೇಶ್ ಅವರ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಲಯವು ತೀರ್ಪು ನೀಡುವವರೆಗೆ ಕೇರಳದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಆಡಳಿತರೂಢ ಸಿಪಿಐ(ಎಂ) ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಅತ್ಯಾಚಾರ ಪ್ರಕರಣದಲ್ಲಿ ಮುಖೇಶ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವುದನ್ನು ವಿಶೇಷ ತನಿಖಾ ತಂಡ ದೃಢಪಡಿಸಿದ ಕೂಡಲೇ ಪಕ್ಷದ ಈ ಹೇಳಿಕೆ ನೀಡಿದೆ.
ಮುಖೇಶ್ ಶಾಸಕರಾಗಿ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಮತ್ತು ನ್ಯಾಯಾಲಯವು ಪ್ರಕರಣದಲ್ಲಿ ತೀರ್ಪು ನೀಡಿದ ನಂತರವೇ ಅವರ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ತಿಳಿಸಿದ್ದಾರೆ.
“ಆರೋಪಪಟ್ಟಿ ಸಲ್ಲಿಸಲಾಗಿದ್ದು ಮತ್ತು ನ್ಯಾಯಾಲಯವು ಈ ಬಗ್ಗೆ ನಿಲುವು ತೆಗೆದುಕೊಂಡಾಗ ನಾವು ಈ ವಿಷಯವನ್ನು ತಿಳಿಸುತ್ತೇವೆ. ಅಲ್ಲಿವರೆಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ, ಏಕೆಂದರೆ ಇದು ಪಕ್ಷದ ನಿಲುವು.” ಎಂದು ಅವರು ಹೇಳಿದ್ದಾರೆ.