ಮಂಗಳೂರು:: ರಾಜ್ಯದ ಕರಾವಳಿಯ ಯಾವ ಮೂಲೆಗೆ ಹೋದರೂ ಸದ್ಯ ಯಕ್ಷಗಾನದ್ದೇ ಕಲರವ. ಕರಾವಳಿ ಉದ್ದಕ್ಕೆ ಸಂಚರಿಸಿದರೆ ಅಲ್ಲಲ್ಲಿ ಯಕ್ಷಗಾನದ ಪೋಸ್ಟರ್, ಬ್ಯಾನರ್ಗಳು ಕಾಣಸಿಗುತ್ತಿರುತ್ತವೆ. ಎಫ್ಬಿ, ವಾಟ್ಸ್ಆ್ಯಪ್ಗಳು ತೆರೆದರೆ, ಇಂತಿಂಥ ಕಡೆ ಈ ದಿನ ಯಕ್ಷಗಾನ ಪ್ರದರ್ಶನವಿದೆ ಎಂಬ ಮಾಹಿತಿ ದೊರಕುತ್ತದೆ. ಆದರೆ 30-40ವರ್ಷಗಳಾಚೆ ಯಕ್ಷಗಾನದ ಪ್ರಚಾರ ಹೇಗಿತ್ತು ಎಂಬುದಕ್ಕೆ ಸದ್ಯ ವೈರಲ್ ಆಗುತ್ತಿರುವ ವೀಡಿಯೋ ಸಾಕ್ಷಿ ನುಡಿಯುತ್ತಿದೆ.
ಟಿವಿಎಸ್ ಮೊಪೆಡ್ಗೆ ಕಾರು ಡಿಕ್ಕಿಯಾಗಿ ಮೊಪೆಡ್ ನಲ್ಲಿದ್ದ ಮಾವ-ಸೊಸೆ ಸಾವು !
ಹೌದು… ಅದೊಂದು ಕಾಲವಿತ್ತು. ಈಗಿನಂತೆ ಬ್ಯಾನರ್, ಪೋಸ್ಟರ್, ತಾಂತ್ರಿಕ ಪ್ರಚಾರಗಳ ಭರಾಟೆಯಿಲ್ಲದ ಕಾಲ. ಆಗ ಕರಾವಳಿಯಲ್ಲಿ ಎಲ್ಲೇ ಯಕ್ಷಗಾನವಿದ್ದರೂ ರಿಕ್ಷಾ, ಟೆಂಪೊಗಳಲ್ಲಿ ಸೌಂಡ್ಬಾಕ್ಸ್ಗಳನ್ನು ಕಟ್ಟಿ ಮೈಕ್ಗಳಲ್ಲಿ ದೊಡ್ಡದಾಗಿ ಯಕ್ಷಗಾನ ಪ್ರದರ್ಶನದ ಪ್ರಚಾರ ಮಾಡಲಾಗುತ್ತಿತ್ತು. ಜನ ಈ ಆಹ್ವಾನವನ್ನೇ ಆಲಿಸಿ ರಾತ್ರಿ ಯಕ್ಷಗಾನ ನಡೆಯುತ್ತಿದ್ದಲ್ಲಿ ಜಮಾಯಿಸುತ್ತಿದ್ದರು. ಜನ ಸುಲಭದ ಆಧುನಿಕ ಪ್ರಚಾರ ಮಾಧ್ಯಮ ನೆಚ್ಚಿದ ಬಳಿಕ ಈ ರೀತಿಯ ಪ್ರಚಾರ ನಿಂತೇ ಹೋಗಿತ್ತು.
ಸದ್ಯ ಹಳೆಯ ಪ್ರಚಾರ ಶೈಲಿಯಲ್ಲಿ ಮಂಗಳೂರಿನ ಕೈಕಂಬ ಎಂಬಲ್ಲಿ ನಡೆಯಲಿದ್ದ ಯಕ್ಷಗಾನ ಪ್ರದರ್ಶನದ ಬಗ್ಗೆ ಮೈಕ್ನಲ್ಲಿ ಪ್ರಚಾರ ಮಾಡುತ್ತಿರುವ ವೀಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದ ಹಳೆಯ ತಲೆಮಾರು ಅಂದಿನ ದಿನಗಳ ಯಕ್ಷಗಾನ ಪ್ರಚಾರವನ್ನು ಮತ್ತೆ ನೆನಪಿಸುವಂತಾಯಿತು.
ಈ ಯಕ್ಷಗಾನ ಪ್ರದರ್ಶನದ ಅನೌನ್ಸರ್ ಯಕ್ಷಗಾನ ಪ್ರಚಾರದೊಂದಿಗೆ ತಮ್ಮ ಅದ್ಭುತ ವಾಕ್ಚಾತುರ್ಯ ಪ್ರದರ್ಶಿಸಿದ್ದಾರೆ. ಮೊದಲಿಗೆ ಯಾರು ಆಡಿಸುತ್ತಿರುವ ಯಕ್ಷಗಾನ, ಎಲ್ಲಿ ಪ್ರದರ್ಶನ, ಯಾವ ಯಕ್ಷಗಾನ ಎಂದು ಹೇಳುತ್ತಾರೆ. ಬಳಿಕ ಕರಾವಳಿಯ ಅಷ್ಟೂ ಶಕ್ತಿಕ್ಷೇತ್ರಗಳ ಶಕ್ತಿದೇವತೆಗಳ, ಗ್ರಾಮದೇವತೆಗಳ ಹೆಸರುಗಳನ್ನು ಹೇಳುತ್ತಾ ಮಾತೆಯಾದ ಆಕೆ ಈ ಯಕ್ಷಗಾನ ಪ್ರದರ್ಶನಕ್ಕೆ ಬಂದವರ ಕಷ್ಟ, ದುಃಖ, ದುಮ್ಮಾನಗಳನ್ನು ಕಳೆದು, ಆಯುರಾರೋಗ್ಯವನ್ನು ಕರುಣಿಸುತ್ತಾಳೆ ಎಂದು ವಿಶಿಷ್ಟವಾದ ಪದಪುಂಜಗಳನ್ನು ಜೋಡಿಸಿ ಹೇಳುತ್ತಾರೆ. ಯಕ್ಷಗಾನ ಪ್ರಚಾರದ ಈ ದೃಶ್ಯವನ್ನು ಅಲ್ಲಿಯೇ ಇದ್ದವರು ಯಾರೋ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ. ಅನೌನ್ಸರ್ ವಾಕ್ಚಾತುರ್ಯಕ್ಕೆ ಕರಾವಳಿಗರು ಫಿದಾ ಆಗಿದ್ದಾರೆ.