ಚಿತ್ರದುರ್ಗ – ಪಂಚಗ್ಯಾರಂಟಿ ಯೋಜನೆಗಳನ್ನು ಕೇವಲ ಚುನಾವಣೆ ಪ್ರಚಾರಕ್ಕಾಗಿ ಜಾರಿ ಮಾಡಿಲ್ಲ. ರಾಜ್ಯದ ಜನರ ಅಭಿವೃದ್ಧಿ ದೂರದೃಷ್ಠಿಯನ್ನು ಗಮನದಲ್ಲಿರಿಸಿ ಜಾರಿ ಮಾಡಲಾಗಿದೆ ಎಂದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಹೆಚ್. ಎಂ. ರೇವಣ್ಣ ಹೇಳಿದರು. ನಗರದ ಜಿ.ಪಂ. ಕಚೇರಿ ಆವರಣದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ನೂತನ ಕಚೇರಿಯನ್ನು ಉದ್ಘಾಟಿಸಿ, ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಈ ಯೋಜನೆಗಳು ನಿಲ್ಲುವುದಿಲ್ಲ. ರಾಜ್ಯ ಸರ್ಕಾರ ಜನಪರ ಯೋಜನೆಗಳ ಜಾರಿಗೆ ಸದಾ ಬದ್ದವಾಗಿರುತ್ತದೆ ಎಂದರು. ಸಿದ್ಧರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಜಾರಿ ಮಾಡಿದರು. ಎರಡನೇ ಬಾರಿ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಇದರಿಂದ ಅವರನ್ನು ಭಾಗ್ಯಗಳ ರಾಜ ಎಂದು ಕರೆಯಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಶಕ್ತಿ ಯೋಜನೆಯಡಿ 377 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ರೂ.9,124 ಕೋಟಿ ಖರ್ಚು ಮಾಡಿದೆ. ಗೃಹಲಕ್ಷ್ಮೀ ಯೋಜನೆಯಡಿ 1.2 ಕೋಟಿ ಮಹಿಳೆಯರು ನೊಂದಣಿಯಾಗಿದ್ದು, ಇವರಿಗೆ ಪ್ರತಿ ತಿಂಗಳು ರೂ.2000 ಹಣವನ್ನು ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಇದಕ್ಕಾಗಿ ರೂ.35,608 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಗೃಹಜ್ಯೋತಿ ರಾಜ್ಯದ ಎಲ್ಲ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಾಗಿ ರೂ.11,810 ಕೋಟಿ ವ್ಯಯಿಸಲಾಗಿದೆ. ಯುವನಿಧಿ ಯೋಜನೆಯಡಿ 2.14 ಲಕ್ಷ ಫಲಾನುಭವಿಗಳಿಗೆ ರೂ.222 ಕೋಟಿ ಹಣ ನೀಡಲಾಗಿದೆ ಎಂದು ಹೆಚ್.ಎಂ.ರೇವಣ್ಣ ಮಾಹಿತಿ ನೀಡಿದರು.
ನಂತರ, ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಪ್ರಚಾರ ಸಂದರ್ಭದಲ್ಲಿ ವಿರೋಧ ಪಕ್ಷದವರು ಗೇಲಿ ಮಾಡಿದ್ದರು. ರಾಜ್ಯದ ಜನತೆ ನಮ್ಮ ಪಕ್ಷವನ್ನು ನಂಬಿ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದರು. ಅಧಿಕಾರಕ್ಕೆ ಬಂದ 3 ತಿಂಗಳ ಒಳಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಲಾಯಿತು. 19 ತಿಂಗಳಿಂದ ನಿರಾಂತಕವಾಗಿ ಯೋಜನೆಗಳು ಮುಂದುವರೆದಿವೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಗೇಲಿ ಮಾಡಿದವರ ಬಾಯಿಂದಲೇ ಪ್ರಶಂಸೆ ಮಾತುಗಳು ಕೇಳಿ ಬರುತ್ತಿವೆ ಎಂದರು.