ಕಾಲಕ್ಕೆ ತಕ್ಕಂತೆ ಅನಾರೋಗ್ಯದ ಸಮಸ್ಯೆಗಳು ಕಂಡು ಬರುತ್ತವೆ. ಅದರಲ್ಲೂ ಕೆಲವರನ್ನು ದೀರ್ಘಕಾಲದಿಂದ ಆಣಿ ಸಮಸ್ಯೆ ಕಾಡುತ್ತಿರುತ್ತದೆ. ಸಾಮಾನ್ಯವಾಗಿ ಕಾಲಿನಲ್ಲಿ ಆಣಿ ಕಾಣಿಸಿಕೊಳ್ಳುತ್ತದೆ. ಇದರಿಂದ ಕಾಲಿನ ಒಂದು ಭಾಗದ ಚರ್ಮವು ಗಟ್ಟಿಯಾಗಿ, ಓಡಾಡಲು ಕಷ್ಟವಾಗುತ್ತವೆ. ಅಷ್ಟೇ ಅಲ್ಲದೆ ಆಣಿಯಾದ ಚರ್ಮದ ಭಾಗವು ಸ್ಪರ್ಶಜ್ಞಾನವನ್ನು ಸಹ ಕಳೆದುಕೊಳ್ಳುತ್ತದೆ.
ಪಾದಗಳ ಅಡಿಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಯಿಂದ ಪಾದರಕ್ಷೆ ಧರಿಸುವುದು ಕಷ್ಟಕರವಾಗುತ್ತದೆ. ಅಲ್ಲದೆ ಇದನ್ನು ನಿರ್ಲಕ್ಷಿಸಿದ್ರೆ ಮುಂದೆ ನಡೆದಾಡುವುದು ಕೂಡ ಕಷ್ಟವಾಗಬಹುದು. ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ರೆ ಕೆಲ ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಆಣಿ ಉಂಟಾಗಲು ಕಾರಣವೇನು? ತುಂಬಾ ಹೊತ್ತು ಒಂದು ಕಡೆ ನಿಂತು ಕೆಲಸ ಮಾಡುವವರಿಗೂ ಆಣಿ ಸಮಸ್ಯೆ ಕಾಡುತ್ತದೆ, ಹಾಗೆಯೇ ತೊಡುವ ಶೂ ತುಂಬಾ ಬಿಗಿಯಾಗಿದ್ದರೆ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ನಿತ್ಯ ಬಿಸಿಲಿನಲ್ಲಿ ತುಂಬಾ ದೂರ ಕ್ರಮಿಸುತ್ತಿದ್ದರೆ ಈ ಸಮಸ್ಯೆ ಹೆಚ್ಚು ಕಾಡುತ್ತದೆ.
ಈರುಳ್ಳಿ ಬಳಕೆ ಈರುಳ್ಳಿಯಲ್ಲಿ ಚರ್ಮದ ಹಲವು ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿ ಇದೆ. ಇದನ್ನು ನಿರಂತರವಾಗಿ ಆಣಿ ಇರುವ ಜಾಗಕ್ಕೆ ಹಚ್ಚುವುದರಿಂದ ಆಣಿ ಕ್ರಮೇಣವಾಗಿ ಗುಣವಾಗುತ್ತದೆ.
ನಿಂಬೆ ಹಣ್ಣು ನಿಂಬೆ ಹಣ್ಣನ್ನು ಆಣಿ ಇರುವ ಜಾಗಕ್ಕೆ ಲೇಪಿಸಬೇಕು, ಹೀಗೆ ನಿರಂತರವಾಗಿ ಹಚ್ಚುವುದರಿಂದ ಚರ್ಮದಲ್ಲಿ ರೂಪುಗೊಂಡಿರುವ ಆಣಿ ಕಡಿಮೆಯಾಗುತ್ತದೆ.
ಹರಳೆಣ್ಣೆ: ಹರಳೆಣ್ಣೆಯನ್ನು ಬಿಸಿನೀರಿಗೆ ಹಾಕಿ ಜತೆಯಲ್ಲಿ ಲಿಕ್ವಿಡ್ ಅನ್ನು ಸೇರಿಸಿ, ಈ ನೀರಿಗೆ ನಿಮ್ಮ ಕಾಲುಗಳನ್ನು ಅದ್ದುವುದರಿಂದ ಆಣಿ ಸಮಸ್ಯೆಗೆ ಪರಿಹಾರ ದೊರಕುತ್ತದೆ.
ಎಲೆ, ಅಡಿಕೆ , ಸುಣ್ಣ ಎಲೆ ಅಡಿಕೆಗೆ ಬಳಸುವ ಸುಣ್ಣವನ್ನು ಬಳಸಿ ಕೂಡ ಆಣಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ ನೀವು, ಸುಣ್ಣಕ್ಕೆ ಚಕ್ಕೆ ಪುಡಿಯನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು. ಈ ಮಿಶ್ರಣವನ್ನು ಆಣಿ ಇರುವ ಜಾಗಕ್ಕೆ ಹಚ್ಚಿಕೊಳ್ಳುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು.
ಎಕ್ಕದ ಎಲೆ ಆಣಿ ಸಮಸ್ಯೆಯನ್ನು ಪರಿಹರಿಸಲು ಎಕ್ಕದ ಗಿಡದ ಹಾಲು ತುಂಬಾ ಪ್ರಯೋಜನಕಾರಿ. ಇದಕ್ಕಾಗಿ ನೀವು ಮಾಡಬೇಕಿರುವುದು ಎಕ್ಕದ ಗಿಡದ ಎಲೆಗಳಿಂದ ಬರುವ ಹಾಲಿಗೆ ಹರಳೆಣ್ಣೆ ಮಿಕ್ಸ್ ಮಾಡಬೇಕು. ಬಳಿಕ ಅದನ್ನು ಹತ್ತಿ ಬಟ್ಟೆಯಿಂದ ಅದ್ದಿ ಆಣಿ ಇರುವ ಜಾಗಕ್ಕೆ ಹಚ್ಚಿ. ಇದರಿಂದ ಆಣಿ ಸಮಸ್ಯೆ ಕಡಿಮೆಯಾಗುತ್ತದೆ.