ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಅರಿಸಿನ ಬೆಳೆಯುವವರ ಸಂಖ್ಯೆ ವಿರಳ ಇಂತಹದರಲ್ಲಿ ಒಣಭೂಮಿಯಲ್ಲಿ ಸಾವಯವ ಪದ್ಧತಿ ಅನುಸಾರ ಅರಿಸಿನ ಬೆಳೆಯಬಹುದು ಎಂದು ತೋರಿಸಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಕೊಟ್ಟವರು ತಾಲ್ಲೂಕಿನ ಹಲ್ಯಾಳ ಗ್ರಾಮದ ರೈತ ಬಸವರಾಜ ಬೆಳವಟಗಿ.
12 ಎಕರೆ ಕೃಷಿ ಭೂಮಿಯಲ್ಲಿ ಸಾವಯವ ಪದ್ಧತಿಯಲ್ಲಿ ದ್ವಿದಳ, ಏಕದಳ ಧಾನ್ಯ, ತರಕಾರಿ, ಹಣ್ಣು ಹೀಗೆ ಹಲವು ಬಗೆಯ ಬೆಳೆಗಳನ್ನು ಅವರು ಬೆಳೆದಿದ್ದಾರೆ. ಕಡಿಮೆ ಖರ್ಚಿನಲ್ಲಿ ಬೆಳೆದು ವಾರ್ಷಿಕವಾಗಿ ಅಧಿಕ ಲಾಭ ಪಡೆದಿದ್ದಾರೆ.
ಎರಡು ಗುಂಟೆ ಜಾಗದಲ್ಲಿ ಅರಿಸಿನ, ನಾಲ್ಕು ಎಕರೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ, ಮೂರು ಎಕರೆಯಲ್ಲಿ ಶೇಂಗಾ ಎಕರೆಯಲ್ಲಿ ಮೆಕ್ಕೆಜೋಳ, ಎರಡು ಎಕರೆಯಲ್ಲಿ ಸೋಯಾಬೀನ್, ಐದು ಎಕರೆಯಲ್ಲಿ ಕಡಲೆ ಬೆಳೆದಿದ್ದಾರೆ. ತರಕಾರಿ, ಹಣ್ಣಿನ ಗಿಡಗಳು ಸೇರಿ ಐದು ನುಗ್ಗೆ ಗಿಡ, ಎರಡು ಹುಣಸೆ ಮರಗಳನ್ನೂ ಬೆಳೆಸಿದ್ದಾರೆ.
ಕಳೆದ ವರ್ಷ ಮಳೆ ಹೆಚ್ಚಾಗಿದ್ದರಿಂದ ಅಂದಾಜು 2 ಗುಂಟೆ ಜಾಗದಲ್ಲಿ ಕೆ.ಜಿಗೆ ₹22ರಂತೆ 10 ಕೆಜಿ ಬೀಜ ಖರೀದಿಸಿ ಅರಿಸಿನ ಬೆಳೆದಿದ್ದರು. ಅದರಿಂದ 25 ಕೆಜಿ ಅರಿಸಿನ ಪುಡಿ ತಯಾರಿಸಿ, ₹7,500 ಲಾಭ ಪಡೆದರು. ಕ್ಯಾನ್ಸರ್, ಅಸ್ತಮಾ, ನೆಗಡಿ ಗುಣಮುಖವಾಗಲು ಮತ್ತು ರಕ್ತಶುದ್ಧಿಗಾಗಿ ಅಗತ್ಯ ಇರುವವರಿಗೆ ಅರಿಸಿನದ ಬೇರನ್ನು ಉಚಿತವಾಗಿ ನೀಡಿ, ಆರೋಗ್ಯದ ಜಾಗೃತಿ ಮೂಡಿಸುತ್ತಾರೆ.
ವರ್ಷಕ್ಕೆ ಅಂದಾಜು 10 ಕ್ವಿಂಟಲ್ ವಿವಿಧ ಬಗೆಯ ತರಕಾರಿ ಬೆಳೆಯುವ ಅವರು ₹15 ಸಾವಿರ ಲಾಭ ಪಡೆಯುತ್ತಾರೆ. 2 ಹುಣಸೆ ಮರಗಳಿಂದ ವರ್ಷಕ್ಕೆ 2 ಕ್ವಿಂಟಲ್ ಹುಣಸೆ ಹಣ್ಣು ಬೆಳೆಸಿ, ವರ್ಷಕ್ಕೆ ₹30 ಸಾವಿರ ಆದಾಯ ಗಳಿಸುತ್ತಾರೆ. ಶೇಂಗಾ ಬೆಳೆಯಿಂದ ಎಣ್ಣೆ ತಯಾರಿಸಿ ಮಾರುತ್ತಿದ್ದು, ಎಲ್ಲ ಉತ್ಪನ್ನಗಳಿಗೂ ಸ್ಥಳೀಯವಾಗಿಯೇ ಮಾರುಕಟ್ಟೆ ಲಭ್ಯವಿದೆ.
ಒಂದು ನುಗ್ಗೆ ಗಿಡ ವರ್ಷಕ್ಕೆ ಅಂದಾಜು 5 ಸಾವಿರ ಕಾಯಿಗಳನ್ನು ಕೊಡುತ್ತದೆ. ಇದರಿಂದ ₹8 ಸಾವಿರ ಲಾಭ ಪಡೆಯಬಹುದು. ನುಗ್ಗೆ ಬೆಳೆಯುವುದರಿಂದ ಮಣ್ಣಿನಲ್ಲಿ ಸಾರಜನಕದ ಪ್ರಮಾಣ ಹೆಚ್ಚಾಗುವುದಲ್ಲದೇ, ಇತರ ಬೆಳೆಗಳಿಗೂ ತಂಪು ವಾತಾವರಣ ನೀಡುತ್ತದೆ. ಅದರ ಎಲೆಗಳನ್ನು ಔಷಧೀಯ ರೂಪದಲ್ಲಿ ಬಳಸುತ್ತಾರೆ.
‘ಮನೆಯಲ್ಲೇ ಬೀಜತಯಾರಿಸುತ್ತಾರೆ.
‘ಕೃಷಿ ಚಟುವಟಿಕೆಗೆಂದೇ ಎರಡು ಎತ್ತುಗಳಿವೆ. ಈಗಲೂ ಟ್ರ್ಯಾಕ್ಟರ್ ಬಳಸದೆ ಗಳೆ ಹೊಡೆದು, ಬಿತ್ತನೆ ಮಾಡುತ್ತೇವೆ. ಎರಡು ‘ಗಿರ್’ ತಳಿಯ ಆಕಳುಗಳಿದ್ದು, ಹಾಲು, ತುಪ್ಪವನ್ನೂ ಮಾರುತ್ತೇವೆ. ಗೋಕೃಪಾಮೃತ, ಘನ ಜೀವಾಮೃತ ತಯಾರಿಸಿ ಹೊಲಕ್ಕೆ ಅದನ್ನೇ ಹಾಕುತ್ತೇವೆ. ಇಲ್ಲಿಯವರೆಗೂ ನಾವು ಬೆಳೆಗಳಿಗೆ ರಾಸಾಯನಿಕ ಬಳಸಿಲ್ಲ. ಕೀಟಬಾಧೆ ತಡೆಯಲು ಮಲ್ಚಿಂಗ್ ಪದ್ಧತಿ ಅಳವಡಿಸಿಕೊಂಡಿದ್ದಾರೆ
ಕೃಷಿ ಇಲಾಖೆ ನೆರವಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, ಸದ್ಯ ಮಳೆ ಕೊರತೆ ಇರುವುದರಿಂದ ಹಣ್ಣಿನ ಗಿಡಗಳಿಗೆ ಪ್ಲಾಸ್ಟಿಕ್ ಬಾಟಲಿಗಳ ಮೂಲಕ ಹನಿ ಹನಿ ನೀರನ್ನು ಪೂರೈಸುತ್ತ, ತೇವಾಂಶ ಕಾಪಾಡುತ್ತಿದೆ.
ಬಿ.ಕಾಂ. ಪದವೀಧರರಾದ ರೈತ ಬಸವರಾಜ ಬೆಳವಟಗಿ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯ, ಕೃಷಿ ಇಲಾಖೆಯ ತರಬೇತಿ, ಕಾರ್ಯಾಗಾರಗಳಲ್ಲಿ ಪಾಲ್ಗೊಂಡು, ಪರಿಣತಿ ಪಡೆದಿದ್ದಾರೆ. ಅವರು ಜಿಲ್ಲೆಯ ಕಲಘಟಗಿ, ನವಲಗುಂದ ಸೇರಿ ವಿವಿಧೆಡೆ ರೈತರಿಗೂ ಮಾಹಿತಿ, ತರಬೇತಿ ನೀಡಿದ್ದಾರೆ. ಅವರು ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ‘ಕೃಷಿ ಪಂಡಿತ’ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.