ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿರುವ ಆರೋಪಿ ಪವಿತ್ರಾ ಗೌಡ ಸದ್ಯ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ. ಮೌನಿ ಅಮಾವಾಸ್ಯೆಯ ದಿನ ಶಾಹಿ ಸ್ನಾನ ಮಾಡಿರುವ ನಟಿ ಅಲ್ಲಿನ ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪವಿತ್ರಾ ಗೌಡ ಅವರು ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಸ್ನೇಹಿತೆಯರೊಂದಿಗೆ ಭೇಟಿ ನೀಡಿದ್ದಾರೆ. ಮೌನಿ ಅಮಾವಾಸ್ಯೆ ದಿನವೇ ಕುಂಭಮೇಳಕ್ಕೆ ತೆರಳಿದ್ದು ಅಲ್ಲಿ ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನವನ್ನು ಮಾಡಿದ್ದಾರೆ. ದೇವರಿಗೆ ಪೂಜೆ ಸಲ್ಲಿಕೆ ಮಾಡಿದ ಬಳಿಕ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಹಣೆಗೆ ಭಂಡಾರ ಬಳಿದು, ಕೈಯಲ್ಲಿ ಹೂವುಗಳನ್ನು ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದು ಈ ವೇಳೆ ತೆಗೆದ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ಎ1 ಆರೋಪಿಯಾಗಿ ಪವಿತ್ರಾ ಗೌಡ ಡಿಸೆಂಬರ್ 17 ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದರು. ಆ ನಂತರ ತಮ್ಮ ಮನೆ ದೇವರಿಗೆ ಪೂಜೆ ಸಲ್ಲಿಕೆ ಮಾಡಿದ್ದರು. ಜಾಮೀನಿನ ಮೇಲೆ ಹೊರ ಬಂದಿರುವ ಪವಿತ್ರಾ ಗೌಡ ತಮ್ಮ ಬ್ಯುಸಿನೆಸ್ ನತ್ತ ಗಮನ ಹರಿಸಿದ್ದಾರೆ.