ಹುಬ್ಬಳ್ಳಿ: ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ ಹುಬ್ಬಳ್ಳಿ ತಾಲೂಕಿನ ನೂಲ್ವಿ ಮಹಾದೇವಿ ಹನುಮಂತಪ್ಪ ಬಾವನೂರ್ (ಸಂಕನಗೌಡರ್) ಅಂತಿಮ ಸಂಸ್ಕಾರ ನಡೆಸಲಾಯಿತು. ತಡರಾತ್ರಿ ವೀರಶೈವ ಲಿಂಗಾಯತ ಸಮುದಾಯದ ವಿಧಿವಿಧಾನ ಮೂಲಕ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಬೆಳಗಾವಿಯಿಂದ ನೂಲ್ವಿ ಗ್ರಾಮಕ್ಕೆ ಮೃತದೇಹವನ್ನು ಆಂಬುಲೆನ್ಸ್ ಮೂಲಕ ತರಲಾಯಿತು. ಮೃತದೇಹ ತರುತ್ತಿರುವ ಸುದ್ದಿ ತಿಳಿದ ನೂಲ್ವಿ ಗ್ರಾಮಸ್ಥರು ಮಹಾದೇವಿ ಮನೆ ಮುಂದೆ ಜಮಾಯಿಸಿದ್ದರು. ಮಹಾದೇವಿ ತಂದೆ ಹನುಮಂತಗೌಡ, ಸಹೋದರರಾ ಬಸವನಗೌಡ, ಮಹಾದೇವಗೌಡ ಸೇರಿದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತ ದೇಹ ಮನೆಗೆ ಆಗಮಿಸುತ್ತಿದ್ದಂತೆ ಇಡೀ ಗ್ರಾಮವೇ ಕಣ್ಣೀರಲ್ಲಿ ಮುಳುಗಿತ್ತು. ತಮ್ಮ ಮನೆ ಮಗಳನ್ನೇ ಕಳೆದುಕೊಂಡ ದುಖಃ ಆವರಿಸಿತ್ತು. ಮೃತ ದೇಹದ ಜೊತೆಯೇ ಆಗಮಿಸಿದ್ದ ಮೃತ ಮಹಾದೇವಿಯ ಪತಿ ಹನುಮಂತಪ್ಪ ಅತೀವ ದುಖದಲ್ಲಿ ಮುಳುಗಿದ್ದರು.