ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಇದೀಗ ತೆಲುಗು ಚಿತ್ರರಂಗದ ಖ್ಯಾತ ನಟ ನಾನಿ ವಿರುದ್ಧ ಕಿಡಿ ಕಾರಿದ್ದಾರೆ. ‘ಹಕ್ಕು ಪಡೆಯದೆ ನಮ್ಮ ಸಿನಿಮಾನ ರಿಮೇಕ್ ಮಾಡಿದ್ದಾರೆ’ ಎಂದು ಪುಷ್ಕರ್ ಆರೋಪ ಮಾಡಿದ್ದಾರೆ.
‘ರಿಮೇಕ್ ಹಕ್ಕು ಪಡೆಯದೆ ‘ಹಾಯ್ ನಾನ್ನ’ ಸಿನಿಮಾ ಮಾಡಲಾಗಿದೆ. ಹಾಯ್ ನಾನ್ನ ‘ಭೀಮ ಸೇನ ನಳಮಹರಾಜ’ ಚಿತ್ರದ ರಿಮೇಕ್ ಆಗಿದ್ದು ನಾನಿ ಅವರು ಎಷ್ಟು ಕೀಳುಮಟ್ಟದ ಕೆಲಸ ಮಾಡಿದ್ದೀರಿ’ ಎಂದು ಪುಷ್ಕರ್ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರೋ ಸ್ಕ್ರೀನ್ಶಾಟ್ ವೈರಲ್ ಆಗಿದೆ. ತೆಲುಗು ಚಿತ್ರರಂಗದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
‘ಭೀಮ ಸೇನ ನಳಮಹರಾಜ’ ಹಾಗೂ ‘ಹಾಯ್ ನಾನ್ನ’ ಸಿನಿಮಾದ ಕಥೆಯ ಎಳೆಯನ್ನು ನೋಡಿದರೆ ಎರಡೂ ಒಂದೇ ರೀತಿ ಎನಿಸುತ್ತದೆ. ‘ಭೀಮ ಸೇನ ನಳಮಹರಾಜ’ ಚಿತ್ರದಲ್ಲೂ ಕಥಾ ನಾಯಕನಿಗೆ ಎಲ್ಲವೂ ಮರೆತು ಹೋಗಿರುತ್ತದೆ. ಆದರೆ, ಆರಂಭದಲ್ಲಿ ಕಥಾ ನಾಯಕಿಗೇ ಎಲ್ಲವೂ ಮರೆತಿದೆ ಎಂಬ ರೀತಿಯಲ್ಲಿ ತೋರಿಸಲಾಗುತ್ತದೆ. ‘ಹಾಯ್ ನಾನ್ನ’ ಚಿತ್ರದಲ್ಲೂ ಇದೇ ರೀತಿಯ ಕಥೆ ಇದೆ. ಎರಡೂ ಚಿತ್ರದ ಮೇಕಿಂದ ಬೇರೆ ಬೇರೆ ಇದ್ದರೂ ಕಥೆಯ ಎಳೆ ಒಂದೇ ರೀತಿ ಇತ್ತು. ‘ಹಾಯ್ ನಾನ್ನ’ ಸಿನಿಮಾ ರಿಲೀಸ್ ಆದಾಗಾಲೂ ಇದೇ ರೀತಿಯ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿತ್ತು. ಪುಷ್ಕರ್ ಮಾಡಿರೋ ಆರೋಪಕ್ಕೆ ‘ಹಾಯ್ ನಾನ್ನ’ ಚಿತ್ರದ ನಿರ್ದೇಶಕ ಶೌರ್ಯೇವ್ ಅವರಾಗಲೀ ಚಿತ್ರದ ನಟ ನಾನಿ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.