ಮಡಿಕೇರಿ: ಅತಿ ಹೆಚ್ಚು ಮಳೆ ಬಂದ ವೇಳೆ ಇಡೀ ಊರಿನ ಸಂಪರ್ಕ ಕಳೆದುಕೊಂಡು ಪರದಾಡುತ್ತಿದ್ದ ಗ್ರಾಮಸ್ಥರ ಸಮಸ್ಯೆಗೆ ಇದು ಬ್ರೇಕ್ ಬೀಳಲಿದೆ. ಭಾಗಮಂಡಲದಲ್ಲಿ ನಿರ್ಮಾಣವಾಗಿರುವ ಕೊಡಗಿನ ಏಕೈಕ ಮೇಲು ಸೇತುವೆ ಇಂದು ವಾಹನ ಸಂಚಾರಕ್ಕೆ ಮುಕ್ತವಾಗಲಿದ್ದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ.
ಸುಮಾರು 8 ವರ್ಷಗಳ ಬಳಿಕ ಮೇಲು ಸೇತುವೆ ಕಾಮಗಾರಿ ಪೂರ್ಣವಾಗಿ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇತುವೆಯನ್ನು ಲೋಕಾರ್ಪಣೆ ಮಾಡಲ್ಲಿದ್ದಾರೆ.
ಪ್ರತಿ ವರ್ಷ ಭಾರೀ ಮಳೆಯಿಂದಾಗಿ ಮಡಿಕೇರಿ ತಾಲೂಕಿನ ಭಾಗಮಂಡಲ ಜಲಾವೃತವಾಗುವುದು ಸರ್ವೇ ಸಾಮಾನ್ಯವಾಗಿತ್ತು. ಇದರಿಂದ ತ್ರಿವೇಣಿ ಸಂಗಮ ಮುಳುಗಡೆಯಾಯಿತೆಂದರೆ ತಲಕಾವೇರಿ, ಕೋರಂಗಾಲ, ಅಯ್ಯಂಗೇರಿ, ನಾಪೋಕ್ಲು ಮತ್ತು ಚೇರಂಗಾಲ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದರಿಂದ ಈ ಭಾಗದ ನಿವಾಸಿಗಳು ಮಳೆಗಾಲದಲ್ಲಿ ವಿಪರೀತ ಸಮಸ್ಯೆ ಅನುಭವಿಸುತ್ತಿದ್ರು. ಇದಿನಿಂದ ಈ ಸಮಸ್ಯೆಗಳಿಂದ ಗ್ರಾಮಸ್ಥರು ಮುಕ್ತರಾಗಲಿದ್ದಾರೆ.
ಇಂದು ಮಧ್ಯಾಹ್ನ 3:30ರ ಸುಮಾರಿಗೆ ಸೇತುವೆ ಲೋಕಾರ್ಪಣೆಗೊಳಿಸಲಿದ್ದಾರೆ. ಇದಕ್ಕೂ ಮೊದಲು ತಲಕಾವೇರಿಗೆ ತೆರಳಿ ನಾಡಿನ ಸುಭೀಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ.