ಮಂಡ್ಯ :- ಮನ್ಮುಲ್ ನಿರ್ದೆಶಕ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ವಿರುದ್ಧ ಮುಂದಿನ ದಿನಗಳಲ್ಲಿ ಪಕ್ಷದಿಂದ ಶಿಸ್ತು ಕ್ರಮ ಆಗಬಹುದು ಎಂದು ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಎಚ್ಚರಿಕೆ ನೀಡಿದರು.
ಮದ್ದೂರು ಪಟ್ಟಣದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ನಿವಾಸದಲ್ಲಿ ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೈತ್ರಿ ಧರ್ಮ ಪರಿಪಾಲನೆ ಮಾಡಬೇಕಿರುವುದು ನಾಯಕನಾದವನಲ್ಲಿರಬೇಕಾದ ಗುಣ ಅದನ್ನು ಬಿಟ್ಟು ನಾಮಪತ್ರವನ್ನು ಹಿಂಪಡೆಯದೇ ಚುನಾವಣಾ ಕಣದಲ್ಲಿ ಉಳಿಯುವ ಮೂಲಕ ಎಸ್.ಪಿ.ಸ್ವಾಮಿ ಪಕ್ಷಕ್ಕೆ ಮುಜುಗರ ತಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ರಾಮ್ ದಾಸ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಹಲವಾರು ನಾಯಕರುಗಳಿಗೆ ಕೆಲವೊಂದು ಸಂದರ್ಭಗಳಲ್ಲಿ ಪಕ್ಷ ಟಿಕೆಟ್ ನೀಡಿಲ್ಲ ಎಂಬುದನ್ನು ಅರಿಯಬೇಕು ಎಂದು ಮನ್ ಮುಲ್ ಚುನಾವಣೆಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್.ಪಿ.ಸ್ವಾಮಿ ರವರ ವಿರುದ್ಧ ಕಿಡಿಕಾರಿದರು.
ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಮೈತ್ರಿ ಧರ್ಮದ ಪ್ರಕಾರ ನಾವು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಮಹೇಶ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದೆವು. ಆನಂತರ ಬಿಜೆಪಿ ಪಕ್ಷದ ವರಿಷ್ಠರು ಅವರ ಪಕ್ಷದಿಂದ ರೂಪಾ ರವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಅದರಂತೆ ಅಂತಿಮವಾಗಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನಾಗಿ ಮಹೇಶ್ ಹಾಗೂ ರೂಪಾ ಅಧಿಕೃತ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ ಎಂದರು.
ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಮನ್ ಮುಲ್ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತಾರೆ ಎಂಬ ವಿಶ್ವಾಸವಿದ್ದು ಅದಕ್ಕಾಗಿ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಕರೆಕೊಟ್ಟರು.
ಮನ್ ಮುಲ್ ನಿರ್ದೇಶಕ ಸ್ಥಾನದ ಮೈತ್ರಿ ಅಭ್ಯರ್ಥಿಗಳಾದ ಮಹೇಶ್, ರೂಪಾ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ.ಸತೀಶ್, ಜಿಲ್ಲಾ ಉಪಾಧ್ಯಕ್ಷ ಸತೀಶ್, ಮಾದನಾಯಕನಹಳ್ಳಿ ರಾಜಣ್ಣ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ