ಮಂಡ್ಯ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ. ನಿನ್ನೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಾ (50) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮಳವಳ್ಳಿಯ ಕೊನ್ನಾಪುರ ಗ್ರಾಮದ ಪ್ರೇಮ ಚನ್ನಪಟ್ಟಣದ ಉಜ್ಜೀವನ್ ಬ್ಯಾಂಕ್ ನಲ್ಲಿ 6ಲಕ್ಷ ಸಾಲ ಪಡೆದಿದ್ದರು. ಈಕೆಯ ಮನೆಯನ್ನು ಸಾಲ ಕಟ್ಟದ ಕಾರಣಕ್ಕೆ ಬೀಗ ಹಾಕಿ ಜಪ್ತಿ ಮಾಡಿದ್ರು.ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಪ್ರೇಮಾ ವಿಷ ಕುಡಿದಿದ್ದರು. ಅವರನ್ನೂ ಸಂಬಂಧಿಕರು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಇನ್ನು ಮೃತ ಪ್ರೇಮಾ ಮಗಳು ಮಾತನಾಡಿ, ನಮ್ಮ ತಾಯಿ ಉಜ್ಜೀವನ್ ಬ್ಯಾಂಕ್ ನಲ್ಲಿ 6 ಲಕ್ಷ ಸಾಲ ಮಾಡಿದ್ದರು. ಗ್ರಾಮದಲ್ಲಿ ಮನೆ ಕಟ್ಟಲು ಸಾಲ ಮಾಡಿದ್ದರು. ಈಗಾಗಲೇ 6 ಲಕ್ಷ ಸಾಲ ತೀರಿಸಿದ್ದೆವು. ನನ್ನ ತಮ್ಮನಿಗೆ ಗ್ಯಾಂಗ್ರಿನ್ ಆಗಿತ್ತು ಹೀಗಾಗಿ 3 ತಿಂಗಳು ಕಂತು ಕಟ್ಟಲು ಆಗಿರಲಿಲ್ಲ. ಆದರೆ ಕಂತು ಕಟ್ಟಲಿಲ್ಲ ಅಂತ ಮನೆ ಸೀಜ್ ಮಾಡಿ ಮನೆಯಿಂದ ಹೊರ ಹಾಕಿದ್ದರು.ಉಜ್ಜೀವನ್ ಬ್ಯಾಂಕ್ ಸಾಲ ತೀರಿಸಲು ಕೆಲಸ ಮಾಡುವ ಜಾಗದಲ್ಲೂ ಸಾಲ ಮಾಡಿದ್ದರು. ಕೆಲಸ ಮಾಡುವ ಜಾಗದಲ್ಲೂ ಸಾಲದ ಕಿರುಕುಳ ಹೆಚ್ಚಾಗಿತ್ತು. ಎರಡೂ ಕಡೆ ಸಾಲದ ಕಿರುಕುಳ ಹೆಚ್ಚಾದ ಹಿನ್ನೆಲೆ ನಿನ್ನೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ರು ಅಂತಾ ಆರೋಪಿಸಿದ್ದಾರೆ.
ಇನ್ನೊಂದೆಡೆ ಮಂಡ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ನೇಣು ಬಿಗಿದುಕೊಂಡು ರಾಜ್ಯ ಸರ್ಕಾರದ ವಿರುದ್ಧ ಅಣಕು ಪ್ರದರ್ಶನ. ಕರ್ನಾಟಕ ರಾಜ್ಯ ರೈತ ಸಂಘವು ಬೃಹತ್ ಪ್ರತಿಭಟನೆ ನಡೆಸಿದ್ದು, ಟ್ರ್ಯಾಕ್ಟರ್ ನಲ್ಲಿ ನೇಣು ಕುಣಿಕೆ ಬಿಗಿದುಕೊಂಡು ರೈತರ ಅಣಕು ಪ್ರದರ್ಶನದ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಾವನ್ನಪ್ಪಿದ ಮಳವಳ್ಳಿಯ ಕೊನ್ನಾಪುರದ ಪ್ರೇಮಾ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಿಹಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ರೈತಮುಖಂಡರಾದ ಇಂಡವಾಳು ಚಂದ್ರಶೇಖರ್, ಅಣ್ಣೂರು ಮಹೇಂದ್ರ, ಶಿವಳ್ಳಿ ಚಂದ್ರಶೇಖರ್ ಸೇರಿ ಮತ್ತಿತರರು ಭಾಗಿಯಾಗಿದ್ದಾರೆ.