ಬೆಂಗಳೂರು:- ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇದರಿಂದ ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಪಡಿತರವನ್ನು ವಿತರಣೆ ಮಾಡಲಾಗುತ್ತದೆ. ಇದೇ ರೇಷನ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಆಗಾಗ ಹೊಸ ನಿಯಮಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಮಹತ್ವದ ಅಪ್ಡೇಟ್ವೊಂದನ್ನು ಕೊಟ್ಟಿದೆ.
ಹೌದು, ರೇಷನ್ ಕಾರ್ಡ್ ಇರುವವರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಯಾವುದೇ ರೀತಿಯ ತಿದ್ದುಪಡಿ ಮಾಡುವುದು ಈಗ ಬಲು ಸುಲಭ ಎನ್ನಲಾಗಿದೆ.
ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದುವ ರೀತಿಯಲ್ಲಿ ರೇಷನ್ ಕಾರ್ಡ್ ಅನ್ನೂ ಹೊಂದಬೇಕಾಗುತ್ತದೆ. ಜೊತೆಗೆ ರೇಷನ್ ಕಾರ್ಡುಗಳಲ್ಲಿ ದೋಷವಿದ್ದರೆ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರೇಷನ್ ಕಾರ್ಡ್ ತಿದ್ದುಪಡಿಯನ್ನು ಸುಲಭಗೊಳಿಸಿದೆ.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯಾಹಾರಗಳ ಸಚಿವಾಲಯವು ರೇಷನ್ ಕಾರ್ಡುಗಳಲ್ಲಿ ಏನಾದರೂ ತಿದ್ದುಪಡಿ ಇದ್ದರೆ, ಅಂದರೆ ಹೆಸರು, ಊರು ಮತ್ತಿತರ ಮಾಹಿತಿಗಳು ತಪ್ಪಾಗಿ ನಮೂದಾಗಿದ್ದರೆ ಅವುಗಳನ್ನು ಸರಿಪಡಿಸಬಹುದು. ತೀರಿಕೊಂಡಿರುವವರು ಮತ್ತು ಕುಟುಂಬ ಭಾಗವಾಗಿದ್ದರೆ ಅಂತವರ ಹೆಸರುಗಳನ್ನು ಹಾಲಿ ರೇಷನ್ ಕಾರ್ಡುಗಳಿಂದ ಡಿಲೀಟ್ ಮಾಡಬಹುದು. ಮದುವೆಯಾದವರು ಹೆಂಡತಿ ಹೆಸರನ್ನು ಮತ್ತು ಮಕ್ಕಳಾದ ಬಳಿಕ ಅವರ ಹೆಸರುಗಳನ್ನು ರೇಷನ್ ಕಾರ್ಡುಗಳಿಗೆ ಹೊಸದಾಗಿ ಸೇರಿಸಬಹುದು.
ಸಾಮಾಜಿಕ ಜಾಲತಾಣದಲ್ಲಿ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಮತ್ತು ತಿದ್ದುಪಡಿ ಮಾಡಲು ಜನವರಿ 31 ಕಡೆಯ ದಿನ ಎನ್ನುವ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಇದರಿಂದಾಗಿ ಗ್ರಾಮ ಒನ್ ಕೇಂದ್ರಗಳ ಬಳಿ ಜನ ಸೇರಿ ಗೊಂದಲ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯಾಹಾರಗಳ ಇಲಾಖೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಬಗ್ಗೆ ಸ್ಪಷ್ಟಿಕರಣ ನೀಡಿದೆ.
ತಿದ್ದುಪಡಿಗೆ ಪ್ರತಿ ತಿಂಗಳು ಕೂಡ ಅವಕಾಶ ಕಲ್ಪಿಸಲಾಗಿದೆ. ಹಳೆಯ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಇಟ್ಟುಕೊಂಡು ಪ್ರತಿ ತಿಂಗಳ ಮೊದಲ ವಾರ ಗ್ರಾಮ ಒನ್ ಮತ್ತು ಬೆಂಗಳೂರು ಒನ್ ಕಚೇರಿಗಳಿಗೆ ಹೋದರೆ ಸುಲಭದಲ್ಲಿ ತಿದ್ದುಪಡಿ ಮಾಡಿಸಬಹುದು. ಅದು ಬಿಟ್ಟು ಯಾವಾಗಲೋ ಹೋಗಿ ನಮ್ಮ ಕೆಲಸ ಆಗಲಿಲ್ಲ ಎಂದು ಕೊರಗುವುದು ಬೇಡ ಎಂದು ಇಲಾಖೆ ತಿಳಿಸಿದೆ.