ಬೆಂಗಳೂರು:- ಕೊಕೇನ್ ಮತ್ತು ಗಾಂಜಾ ಸೇರಿ ಬರೋಬ್ಬರಿ 36 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ನಾಶಪಡಿಸಿದ್ದಾರೆ.
ಮಾದಕ ದ್ರವ್ಯಗಳ ಕಳ್ಳಸಾಗಣೆ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಬೆಂಗಳೂರು ನಗರ ಕಸ್ಟಮ್ಸ್ ಕಮಿಷನರೇಟ್ ಸುಮಾರು 36 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ನಾಶಪಡಿಸಿದೆ. ಈ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. ಕೊಕೇನ್ ಮತ್ತು ಗಾಂಜಾ ಸೇರಿದಂತೆ ಒಟ್ಟು 11.997 ಕಿಲೋದಷ್ಟು ನಿಷೇಧಿತ ಡ್ರಗ್ಸ್ ಅನ್ನು ಜನವರಿ 24 ರಂದು ದಹಿಸಲಾಗಿತ್ತು.
ಮಾದಕವಸ್ತು ಕಳ್ಳಸಾಗಣೆ ಮತ್ತು ಅದರ ಅಕ್ರಮ ವಿತರಣೆ ತಡೆಗಟ್ಟುವುದಕ್ಕಾಗಿ ಕೇಂದ್ರ ನೇರ ತೆರಿಗೆಗಳ ಮಂಡಳಿ ಮತ್ತು ಕಸ್ಟಮ್ಸ್ ಆರಂಭಿಸಿದ ಮಾದಕ ದ್ರವ್ಯ ವಿಲೇವಾರಿ ಅಭಿಯಾನದಡಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.