ಅಮೆರಿಕಾದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಶಿವರಾಜ್ ಕುಮಾರ್ ಇಂದು ತಾಯ್ನಾಡಿಗೆ ಮರಳಿದ್ದಾರೆ.
ಮೂತ್ರಕೋಶದ ಕ್ಯಾನ್ಸರ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಮೆರಿಕಾಗೆ ಶಸ್ತ್ರ ಚಿಕಿತ್ಸೆಗೆ ತೆರಳಿದ್ದರು. ಅಮೆರಿಕಾದ ಖ್ಯಾತ ಕ್ಯಾನ್ಸರ್ ಸೆಂಟರ್ ಮಿಯಾಮಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ನಟ ಇಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಇತ್ತೀಚಿಗಷ್ಟೇ ಶಿವಣ್ಣ ತಾಯ್ನಾಡಿಗೆ ಬರುವ ಸಿಹಿ ಸುದ್ದಿಯನ್ನು ಸ್ವತಃ ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿ ತಾಯ್ನಾಡಿಗೆ ಮರಳಿದ್ದಾರೆ.
ಅಮೆರಿಕದಿಂದ ದುಬೈಗೆ ಬಂದಿಳಿದು, ಅಲ್ಲಿಂದ ಕನೆಕ್ಟೆಡ್ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಳಿಗ್ಗೆ 9ರ ಆಸುಪಾಸಿನಲ್ಲಿ ಬೆಂಗಳೂರಿನ ಏರ್ಪೋಟ್ನಲ್ಲಿ ಲ್ಯಾಂಡ್ ಆಗಿದ್ದು, ವಿಮಾನ ನಿಲ್ದಾಣದ ಪ್ರಕ್ರಿಯೆಗಳನ್ನು ಮುಗಿಸಿ ಆಗಮನ ಗೇಟ್ 1ರಲ್ಲಿ ಹೊರಬಂದಿದ್ದಾರೆ.
ಇನ್ನೂ ಮನೆ ಬಳಿ ಶಿವಣ್ಣರನ್ನ ಸ್ವಾಗತಿಸಲು 500ಕೆ.ಜಿ ಹೂಗಳನ್ನ ತಯಾರಿ ಮಾಡಿಕೊಂಡಿರುವ ದೊಡ್ಮನೆ ಅಭಿಮಾನಿಗಳು ಕಾಯುತ್ತಿದ್ದಾರೆ. ಜೊತೆಗೆ ಮೂರು ಜೆಸಿಬಿಗಳ ಮೂಲಕ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರಿಗೆ ಹೂ ಹಾಕಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದು, ನಾಗವಾರದ ನಿವಾಸದ ಬಳಿ ಅಭಿಮಾನಿಗಳು ದಂಡು ಹರಿದು ಬಂದಿದೆ.
ಏರ್ಪೋರ್ಟ್ ಬಳಿಯ ಟೋಲ್ನಿಂದ ಹಿಡಿದು ನಾಗವಾರದ ಮನೆಯವರೆಗೂ ಶಿವಣ್ಣರನ್ನ ಬರಮಾಡಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ. ಶಿವಣ್ಣ ಅವರ ನಿವಾಸದ ಬಳಿ ಅಭಿಮಾನಿಗಳು ಬ್ಯಾನರ್, ಕಟೌಟ್ ಹಾಕಿ ಸ್ವಾಗತ ಮಾಡೋದಕ್ಕೂ ತಯಾರಿ ಮಾಡಿಕೊಂಡಿದ್ದಾರೆ. ಇನ್ನೂ ಸೋಮವಾರ ಶಿವಣ್ಣನ ಮನೆಯಲ್ಲಿ ಹೊಸ ವರ್ಷ ಹಾಗೂ ಸಂಕ್ರಾಂತಿ ಸಂಭ್ರಮ ಒಟ್ಟೊಟ್ಟಿಗೆ ಆಚರಿಸಲಿದ್ದಾರೆ.