ಉಗ್ರಂ ಮಂಜು ಬಿಗ್ ಬಾಸ್ ಫಿನಾಲೆ ವಾರಕ್ಕೆ ತಲುಪಿದ್ದಾರೆ. ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಕೆಲಸ ಮಾಡುತ್ತಿರುವ ಉಗ್ರಂ ಮಂಜು ಇನ್ನೂ ಮದುವೆಯಾಗಿಲ್ಲ. ಇದೇ ವಿಷಯಕ್ಕೆ ಸುದೀಪ್ ಆಗಾಗ್ಗೆ ಕಾಲೆಳೆಯುತ್ತಿರುತ್ತಾರೆ. ಕೊನೆಗೂ ಉಗ್ರಂ ಮಂಜು ಮದುವೆಯಾಗಲು ಮನಸ್ಸು ಮಾಡಿದ್ದು ಹುಡುಗಿ ಹುಡುಕಿ ಎಂದು ತಂದೆಗೆ ಹೇಳಿದ್ದಾರೆ.
ಶನಿವಾರದ ಎಪಿಸೋಡ್ನಲ್ಲಿ ಉಗ್ರಂ ಮಂಜು ಅವರ ತಂದೆ ಬಿಗ್ಬಾಸ್ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದರು. ಮಗನಿಗಾಗಿ ಕುಣಿದು ಎಲ್ಲರನ್ನು ರಂಜಿಸಿದರು. ಅದಾದ ಬಳಿಕ ಸುದೀಪ್ ಜೊತೆಗೆ ಮಾತನಾಡಿದ ಮಂಜು ಅವರ ತಂದೆ, ‘ಒಂದು ಬಾರಿ ಬಿಗ್ಬಾಸ್ ಮನೆಗೆ ಬಂದಿದ್ದರಿಂದ ನಾನು ಬಹಳ ಫೇಮಸ್ ಆಗಿಬಿಟ್ಟಿದ್ದೀನಿ. ನೂರಾರು ಜನ ಈಗ ನನ್ನನ್ನು ಗುರುತಿಸುತ್ತಿದ್ದಾರೆ. ಯಾರ್ಯಾರೋ ಬಂದು ಸೆಲ್ಫಿ ತೆಗೆದುಕೊಳ್ಳುತ್ತಾರೆ’ ಎಂದಿದ್ದಾರೆ.
‘ನಿಮ್ಮ ತಂದೆ ನಿನಗಾಗಿ ಫರ್ಮಾಮೆನ್ಸ್ ಮಾಡಿ ಗಿಫ್ಟ್ ಕೊಟ್ಟಿದ್ದಾರೆ. ನೀನು ಅಪ್ಪನಿಗೆ ಏನು ಗಿಫ್ಟ್ ಕೊಡುತ್ತೀರ’ ಎಂದು ಸುದೀಪ್, ಮಂಜು ಅನ್ನು ಪ್ರಶ್ನೆ ಮಾಡಿದರು. ಅದಕ್ಕೆ ಮಂಜು, ‘ಮದ್ವೆ ಆಗ್ತೀನಿ ಹುಡುಗಿ ಹುಡುಕಪ್ಪ’ ಎಂದರು. ಅದಕ್ಕೆ ಮಂಜು ಅವರ ತಂದೆ, ನಾವು ಮದುವೆ ಮಾಡಲು ರೆಡಿ ಇದ್ದೀವಿ. ಯಾರನ್ನಾದರೂ ಪ್ರೀತಿಸಿದ್ದರೆ ಹೇಳು ಅವರೊಟ್ಟಿಗೆ ಮದುವೆ ಮಾಡೋಣ ಎಂದರು.
‘ಮುಂಚೆ ಪ್ರೀತಿಸಿದ್ದೆ ಆದರೆ ಈಗ ಇಲ್ಲ’ ಎಂದು ಉತ್ತರಿಸಿದರು ಮಂಜು. ಆ ವಿಷಯ ತಮಗೂ ಗೊತ್ತೆಂದು ಮಂಜು ಅವರ ತಂದೆ, ಮುಂಚೆ ಯಾವುದೋ ಹುಡುಗಿಯನ್ನು ಪ್ರೀತಿಸಿದ್ದಾಗಿ ಮಂಜು ಹೇಳಿದ್ದರು. ಆದರೆ ಆಗ ನಾನೇ ಬೇಡ ಅಂದಿದ್ದೆ. ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಮೊದಲು ಅವರ ಮದುವೆ ಆಗಬೇಕು ಅದಾದ ಮೇಲೆ ನೋಡೋಣ ಎಂದಿದ್ದೆ. ಹೆಣ್ಣು ಮಕ್ಕಳ ಮದುವೆ ಮಾಡಿ ಮುಗಿಸುವಷ್ಟರಲ್ಲಿ ಆಕೆಯ ಮದುವೆ ಆಗಿ ಹೋಗಿತ್ತು. ಅದಾದ ಮೇಲೆ ಎಷ್ಟು ಬಾರಿ ಸಂಬಂಧಗಳನ್ನು ನೋಡಿ ಬಂದರೂ ಎಲ್ಲರನ್ನೂ ಬೇಡ ಬೇಡ ಎನ್ನುತ್ತಲೇ ಇದ್ದ’ ಎಂದರು ಉಗ್ರಂ ಮಂಜು ತಂದೆ.