ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ , ಮಾಜಿ ರಾಜಕಾರಣಿ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಹಿರಿಯ ನಟ ಅನಂತ್ ನಾಗ್ ಜೊತೆಗೆ ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರಿಗೂ ಸಹ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.
ಒಟ್ಟು ಹತ್ತೊಂಬತ್ತು ಮಂದಿಗೆ ಪದ್ಮಭೂಷಣ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಅದರಲ್ಲಿ ಕಲಾ ವಿಭಾಗದಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ಮತ್ತು ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಆಗಿದೆ. 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳ ಘೋಷಣೆಯಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ, ಮೂರು ಗ್ರ್ಯಾಮಿ ಪ್ರಶಸ್ತಿಗಳ ವಿಜೇತ ರಿಕ್ಕಿ ಕೇಜ್ ಅವರಿಗೂ ಸಹ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇವರ ಕಲಾ ಸೇವೆಯನ್ನು ಗುರುತಿಸಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕರ್ನಾಟಕದಲ್ಲಿ ನೆಲೆಸಿರುವ ಖ್ಯಾತ ವಯಲಿನ್ ವಾದಕ ಕ್ಷ್ಮೀನಾರಾಯಣ ಸುಬ್ರಮಣ್ಯಂ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಖ್ಯಾತ, ಹಾಸನ್ ರಘು, ವೆಂಕಪ್ಪ ಅಂಬಾಜಿ ಅವರುಗಳಿಗೂ ಸಹ ಕಲಾ ವಿಭಾಗದಲ್ಲಿ ಪದ್ಮಶ್ರೀ ಘೋಷಿಸಲಾಗಿದೆ.