ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಜನವರಿ 26ರ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ರಾಜ್ಯಪಾಲರು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. 1051 ಪೊಲೀಸ್ ಅಧಿಕಾರಿಗಳು ಭದ್ರತೆಗೆ ನಿಯೋಜಿಸಲಾಗುತ್ತದೆ. ವಿವಿಧ ಬಣ್ಣದ ಪಾಸ್ಗಳ ಮೂಲಕ ಪ್ರವೇಶ ವ್ಯವಸ್ಥೆ ಮಾಡಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿದ್ದಾರೆ.
ಶುಭ ಶುಕ್ರವಾರ ಲಕ್ಷ್ಮಿ ಪೂಜೆ ಮಾಡುವಾಗ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಗೊತ್ತಾ..?
ಈ ಸಂಬಂಧ ಮಾತನಾಡಿದ ಅವರು, ಈ ಭಾರಿ ಗಣರಾಜ್ಯೋತ್ಸವಕ್ಕೆ ಸಕಲ ತಯಾರಿಯಾಗಿದೆ. ಯಾವುದೇ ಸಮಸ್ಯೆಯಾಗದಂತೆ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಪೊಲೀಸ್ ಭದ್ರತೆ
8 ಮಂದಿ ಡಿಸಿಪಿ, 17 ಮಂದಿ ಎಸಿಪಿ, 44 ಮಂದಿ ಪಿಐ, 114 ಮಂದಿ ಪಿಎಸ್ಐ, 58 ಮಂದಿ ಎಎಸ್ಐ, 80 ಮಂದಿ ಸಿಬ್ಬಂದಿ, 30 ಜನ ಕ್ಯಾಮೆರಾ ಸಿಬ್ಬಂದಿ ಸೇರಿದಂತೆ ಒಟ್ಟು 1051 ಜನ ಅಧಿಕಾರಿಗಳು ಭದ್ರತೆಗೆ ಇರುತ್ತಾರೆ. ಬಂದೋಬಸ್ತ್ಗೆ 10 ಕೆಎಸ್ಆರ್ಪಿ ತುಕಡಿ, 2 ಅಗ್ನಿಶಾಮಕ ವಾಹನ, ಕ್ಷಿಪ್ರ ಕಾರ್ಯಾಚರಣೆ ತಂಡ ಇರುತ್ತದೆ. ಮೈದಾನದ ಸುತ್ತ 103 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.
ಪ್ರವೇಶ ದ್ವಾರಗಳ ವಿವರ
ಕಲರ್ ಕೋಡ್ಗಳ ಮೂಲಕ ಪಾಸ್ ವಿತರಿಸಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಪಿಂಕ್ ಬಣ್ಣದ ಪಾಸ್ ನೀಡಲಾಗುತ್ತದೆ. ವಿಐಪಿ ಪಾಸ್ ಗೇಟ್-2ರ ಮೂಲಕ ಪ್ರವೇಶಿಸಬಹುದಾಗಿದೆ. ಮುಖ್ಯ ಅತಿಥಿಗಳು, ಗಣ್ಯರು ಗೇಟ್-3 ಮೂಲಕ ಪ್ರವೇಶಿಸಬಹುದು. ಗೇಟ್-4ರಲ್ಲಿ ಬಿಳಿ ಪಾಸ್ ನೀಡಲಾಗುತ್ತದೆ, ಇಲ್ಲಿ ಮಾಧ್ಯಮದವರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ವಾಹನ ಸಂಚಾರ ನಿರ್ಬಂಧ
ಜ.26ರಂದು ಬೆಳಗ್ಗೆ 8.30 ರಿಂದ 10.30ರವರೆಗೆ ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಬಿಆರ್ವಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ರಸ್ತೆಗಳಲ್ಲಿ ಸಂಚರಿಸಲು ನಗರ ಸಂಚಾರ ಪೊಲೀಸರ ಸೂಚನೆ ನೀಡಿದ್ದಾರೆ.
ವಾಹನ ನಿಲುಗಡೆಗೆ ನಿಷೇಧ
ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತ, ಶಿವಾಜಿನಗರ ಬಸ್ ನಿಲ್ದಾಣ, ಕಬ್ಬನ್ ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್.ರಸ್ತೆ, ಕಬ್ಬನ್ ಜಂಕ್ಷನ್ವರೆಗೆ, ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.