ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕ ಫೇಮಸ್ ಆಗಿರುವ ವಕೀಲ ಜಗದೀಶ್ ಹೋದಲ್ಲಿ ಬಂದಲೆಲ್ಲ ಕಿರಿಕ್ ಮಾಡಿಕೊಳ್ತಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುವ ಜಗದೀಶ್ ವರ್ತನೆಯನ್ನು ಹಲವರು ಖಂಡಿಸಿದ್ದಾರೆ. ಈ ಮಧ್ಯೆ ಜಗದೀಶ್ ಅವರ ಮೇಲೆ ಹಲ್ಲೆಗೆ ಪ್ರಯತ್ನ ನಡೆದಿರುವ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿಯ ವಿರೂಪಾಕ್ಷ ನಗರದಲ್ಲಿ ನಡೆದಿದ್ದು ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಡಿಗೇಹಳ್ಳಿಯಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಒಂದು ಇದೆ. ಇದೇ ರಸ್ತೆಯಲ್ಲಿ ಸ್ಥಳೀಯರು ಅಣ್ಣಮ್ಮ ದೇವಿಯನ್ನು ಕೂರಿಸಲು ಪ್ಲ್ಯಾನ್ ಮಾಡಿದ್ದರು. ಇದಕ್ಕೆ ಜಗದೀಶ್ ಅವರು ಆಕ್ಷೇಪ ತೆಗೆದಿದ್ದಾರೆ. ಅಲ್ಲದೆ ಠಾಣೆಗೆ ದೂರು ನೀಡಿದ್ದಾರೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರ ಜೊತೆ ಚರ್ಚಿಸಿದ್ದಾರೆ. ಪೆಂಡಾಲ್ ಹಾಕಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತದೆ ಎಂಬುದು ಜಗದೀಶ್ ಅವರ ವಾದ ಆಗಿತ್ತು. ಆದರೆ, ಪೆಂಡಾಲ್ ತೆಗೆಯಲು ಸ್ಥಳಿಯರು ಒಪ್ಪಿಲ್ಲ.
ಜಗದೀಶ್ ಅವರ ವಿರುದ್ಧ 40ಕ್ಕೂ ಅಧಿಕ ಸ್ಥಳೀಯರು ಬಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಅವರ ಮೇಲೆ ಹಲ್ಲೆಗೂ ಯತ್ನ ನಡೆದಿದೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಆದರೆ, ಅವಾಚ್ಯ ಶಬ್ದ ಬಳಕೆಯ ಕಾರಣದಿಂದ ಅವರು ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಮನೆಯಿಂದ ಔಟ್ ಆದರು. ಸದ್ಯ ಕಲರ್ಸ್ನಲ್ಲಿ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಪ್ರಸಾರ ಕಾಣುತ್ತಿದ್ದು, ಇದರಲ್ಲಿ ಜಗದೀಶ್ ಅವರು ಭಾಗವಹಿಸುತ್ತಿದ್ದಾರೆ.