2019ರ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರಕಟವಾಗಿದ್ದ ಪೈಲ್ವಾನ್ ಸಿನಿಮಾದ ನಟನೆಗೆ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭೀಸಿದೆ. ಆದರೆ ಸುದೀಪ್ ಈ ಪ್ರಶಸ್ತಿಯನ್ನು ನಯವಾಗಿಯೇ ನಿರಾಕರಿಸಿದ್ದಾರೆ. ಸುದೀಪ್ ಅವರ ಈ ನಿರ್ಧಾರದ ಬಗ್ಗೆ ಅಭಿಮಾನಿಗಳಲ್ಲಿ ಹಲವರು ರೀತಿಯ ಪ್ರಶ್ನೆ ಮೂಡಿದೆ. ಆದರೆ ರಾಜ್ಯ ಪ್ರಶಸ್ತಿ ನಿರಾಕರಣೆಯ ಹಿಂದಿದೆ ಸುದೀಪ್ ನೋವಿನ ಅಸಲಿ ಕಥೆ.
ಸುದೀಪ್ ಕೆಲ ವರ್ಷಗಳಿಂದ ಪ್ರಶಸ್ತಿಗಳನ್ನು ನಿರಾಕರಿಸುತ್ತಾ ಬಂದಿದ್ದಾರೆ. ಈ ನಿರಾಕರಣೆಯ ಹಿಂದೆ ಅದರದ್ದೇ ಆದ ನೋವಿದೆ. ಪ್ರಶಸ್ತಿಗಳನ್ನು ಸುದೀಪ್ ನಿರಾಕರಿಸಲು ಕಾರಣ ಅದೊಂದು ಘಟನೆ. 2004ರ ವೇಳೆ, ‘ರಂಗ ಎಸ್.ಎಸ್.ಎಲ್.ಸಿ’ ಮತ್ತು ‘ಮುಸ್ಸಂಜೆ ಮಾತು’ ಸಿನಿಮಾ ಮಾಡಿದಾಗ ಪ್ರಶಸ್ತಿ ಕಮಿಟಿಯಲ್ಲಿದ್ದವರೇ ಸುದೀಪ್ಗೆ ಕರೆ ಮಾಡಿ ನಿಮಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ ಅಂತ ಹೇಳಿದ್ದರು. ಸಹಜವಾಗಿಯೇ ಸುದೀಪ್ ಸಂಭ್ರಮಿಸಿದ್ದರು. ಆದರೆ, ರಾಜ್ಯ ಪ್ರಶಸ್ತಿ ಘೋಷಣೆ ಆದಾಗ ಸುದೀಪ್ ಬದಲಿಗೆ ಅಲ್ಲಿ ಬೇರೆ ನಟರ ಹೆಸರಿತ್ತು. ಈ ಎರಡು ಘಟನೆಯಿಂದಾಗಿ ಅವರು ಪ್ರಶಸ್ತಿಗಳನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಕೆಲ ವರ್ಷಗಳಿಂದ ಅವರು ಪ್ರಶಸ್ತಿ ಸಮಾರಂಭಗಳಿಗೂ ಹೋಗುವುದನ್ನು ಕೂಡ ಸುದೀಪ್ ನಿಲ್ಲಿಸಿದ್ದಾರೆ.
ಇನ್ನೂ ಆಗಸ್ಟ್ 2024ನಲ್ಲಿ ತುಮಕೂರು ವಿಶ್ವವಿದ್ಯಾಲಯವು ಸುದೀಪ್ಗೆ ಗೌರವ ಡಾಕ್ಟರೇಟ್ ಘೋಷಿಸಿತ್ತು. ಆ ಗೌರವವನ್ನು ಕೂಡ ಸುದೀಪ್ ನಿರಾಕರಿಸಿದ್ದರು.
ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ರಾಜ್ಯ ಪ್ರಶಸ್ತಿ ನಿರಾಕರಿಸಿ ಟ್ವೀಟ್ವೊಂದನ್ನು ಮಾಡಿದ್ದಾರೆ. ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ. ಈ ಗೌರವಕ್ಕಾಗಿ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಆದಾಗ್ಯೂ, ನಾನು ಹಲವಾರು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲು ನಾನು ನಿರ್ಧರಿಸಿದ್ದೇನೆ. ಅದಕ್ಕೆ ವಿವಿಧ ವೈಯಕ್ತಿಕ ಕಾರಣಗಳಿವೆ. ಈ ಕಲೆಗಾಗಿ ತಮ್ಮ ಹೃದಯವನ್ನು ಅರ್ಪಿಸಿದ ಅನೇಕ ಸಮರ್ಥ ನಟರು ಇದ್ದಾರೆ. ನನಗಿಂತಲೂ ಹೆಚ್ಚಾಗಿ ಅವರಿಗೆ ಈ ಗೌರವ ಸಲ್ಲಬೇಕು. ಅವರಲ್ಲಿ ಒಬ್ಬರು ಈ ಗೌರವ ಪಡೆದರೆ ನನಗೆ ಹೆಚ್ಚು ಖುಷಿ ಆಗುತ್ತದೆ. ಜನರನ್ನು ರಂಜಿಸಬೇಕು ಎಂಬ ನನ್ನ ಕೆಲಸದಲ್ಲಿ ಪ್ರಶಸ್ತಿಗಳ ನಿರೀಕ್ಷೆ ಇಲ್ಲ. ಜ್ಯೂರಿಗಳು ನನ್ನನ್ನು ಗುರುತಿಸಿರುವುದು ನನಗೆ ಇನ್ನಷ್ಟು ಉತ್ತೇಜನ ನೀಡಿದೆ.
ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಜ್ಯೂರಿಗಳಿಗೆ ನಾನು ಚಿರಋಣಿ. ಈ ಮನ್ನಣೆಯೇ ನಿಜವಾದ ಪ್ರಶಸ್ತಿ. ನನ್ನ ನಿರ್ಧಾರದಿಂದ ನಿರಾಸೆ ಆಗಿದ್ದರೆ ಜ್ಯೂರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಕ್ಷಮೆ ಕೇಳುತ್ತೇನೆ. ನನ್ನ ನಿರ್ಧಾರವನ್ನು ನೀವು ಗೌರವಿಸುತ್ತೀರಿ ಮತ್ತು ನನ್ನನ್ನು ಬೆಂಬಲಿಸುತ್ತೀರಿ ಎಂಬ ನಂಬಿಕೆ ನನಗೆ ಇದೆ. ಮತ್ತೊಮ್ಮೆ, ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರರ ಗೌರವಾನ್ವಿತ ಸದಸ್ಯರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ನಟ ಬರೆದುಕೊಂಡಿದ್ದಾರೆ.