ನಟ ಸೈಫ್ ಅಲಿ ಖಾನ್ ಮೇಲೆ ದುಷ್ಕರ್ಮಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿರುವ ಬೆನ್ನಲ್ಲೇ ಹಿಂದಿ ಚಿತ್ರರಂಗದ ಐವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಜೀವ ಬೆದರಿಕೆ ಹಾಕಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಹಾಸ್ಯ ಕಲಾವಿದ ಕಪಿಲ್ ಶರ್ಮಾ, ರಾಜ್ಪಾಲ್ ಯಾದವ್, ಸುಗಂಧ ಮಿಶ್ರಾ ಮತ್ತು ಕೊರಿಯೋಗ್ರಾಫರ್ ರೆಮೋ ಡಿಸೋಜಾಗೆ ಜೀವ ಬೆದರಿಕೆ ಇ-ಮೇಲ್ಗಳು ಬಂದಿದೆ. ಜೀವ ಬೆದರಿಕೆ ಬಂದ ಕುರಿತು ಆಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಇನ್ನು ತನಿಖೆ ವೇಳೆ ಈ ಬೆದರಿಕೆ ಸಂದೇಶ ಪಾಕಿಸ್ತಾನದಿಂದ ಬಂದಿವೆ ಎಂದು ತಿಳಿದುಬಂದಿವೆ.
ನಿಮ್ಮ ಇತ್ತೀಚಿನ ಚಟುವಟಿಕೆಯನ್ನು ಗಮನಿಸುತ್ತಿದ್ದೇವೆ ಮತ್ತು ಸೂಕ್ಷ್ಮ ವಿಷಯವನ್ನು ನಿಮ್ಮ ಗಮನಕ್ಕೆ ತರುವುದು ಮುಖ್ಯ ಎಂದು ನಾವು ನಂಬುತ್ತೇವೆ. ಇದು ಪಬ್ಲಿಸಿಟಿ ಸ್ಟಂಟ್ ಅಥವಾ ನಿಮಗೆ ಕಿರುಕುಳ ನೀಡುವ ಪ್ರಯತ್ನವಲ್ಲ.ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಂದೇಶ ಕಳಿಸಿದ್ದಾರೆ. ಸಂದೇಶದ ಕೆಳಗೆ ‘ಬಿಷ್ಣು’ ಎಂದು ಸಹಿ ಮಾಡಿದ್ದಾರೆ. ಪೊಲೀಸರ ಪ್ರಕಾರ, ಸೆಲೆಬ್ರಿಟಿಗಳಿಂದ 8 ಗಂಟೆಗಳ ಒಳಗೆ ಈ ಸಂದೇಶಕ್ಕೆ ಉತ್ತರವನ್ನು ಕೇಳಲಾಗಿತ್ತು, ಇಲ್ಲದಿದ್ದರೆ ಅವರು ವೈಯಕ್ತಿಕ ಮತ್ತು ವೃತ್ತಿಪರ ರಂಗಗಳಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ.
ಹಾಸ್ಯನಟ ಕಪಿಲ್ ಶರ್ಮಾ ಇತ್ತೀಚೆಗೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಅವರಿಗಿಂತ ಮೊದಲು, ಸುಗಂಧ ಮಿಶ್ರಾ ಮತ್ತು ರೆಮೋ ಡಿಸೋಜಾ ಕೂಡ ಅದೇ ಮೇಲ್ ಸ್ವೀಕರಿಸಿದ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳೆದ ವರ್ಷ ಡಿಸೆಂಬರ್ 14 ರಂದು ರಾಜ್ಪಾಲ್ ಯಾದವ್ ಈ ಮೇಲ್ ಅನ್ನು ಸ್ವೀಕರಿಸಿದ್ದರು. ಡಿಸೆಂಬರ್ 17 ರಂದು ಅವರು ಪೊಲೀಸರಿಗೆ ದೂರು ದಾಖಲಿಸಿದರು.