ಇತ್ತೀಚೆಗೆ ದುಷ್ಕರ್ಮಿಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಸದ್ಯ ಸುಧಾರಿಸಿಕೊಳ್ಳುತ್ತಿದ್ದಾರೆ. 2 ಶಸ್ತ್ರ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸೈಫ್ ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರ ಸಚಿವ ನಿತೀಶ್ ರಾಣೆ ಘಟನೆ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಸೈಫ್ ಮೇಲೆ ದಾಳಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ರಾಣೆ, ನಟನ ಮೇಲೆ ದಾಳಿಯಾಗಿರುವ ಬಗ್ಗೆಯೇ ಶಂಕೆ ಇದೆ. ಅವರು ನಟಿಸುತ್ತಿದ್ದಂತೆ ಭಾಸವಾಗುತ್ತಿದೆ ಎಂದಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ನಿತೀಶ್ ರಾಣೆ, ಮುಂಬೈನ ಲೀಲಾವತಿ ಆಸ್ಪತ್ರೆಯ ವೈದ್ಯರು ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆಸಿದ ಚಾಕು ದಾಳಿಯಲ್ಲಿ ಬೆನ್ನುಹುರಿಯ ಬಳಿ ಆರು ಇರಿತದ ಗಾಯಗಳಾಗಿವೆ ಎಂದು ಹೇಳಿದ್ದು ನಿಜದಂತೆ ಕಾಣುತ್ತಿಲ್ಲ. ಮುಂಬೈನಲ್ಲಿ ಬಾಂಗ್ಲಾದೇಶಿಗಳು ಏನು ಮಾಡುತ್ತಿದ್ದಾರೆಂದು ನೋಡಿ. ಅವರು ಸೈಫ್ ಅಲಿ ಖಾನ್ ಅವರ ಮನೆಗೆ ಪ್ರವೇಶಿಸಿದ್ದಾರೆ. ಬಹುಶಃ ಅವರು ಸೈಫ್ ರನ್ನು ಕರೆದುಕೊಂಡು ಹೋಗಲು ಬಂದಿರಬಹುದು. ಇದು ಒಳ್ಳೆಯ ಕೆಲಸ. ಕಸವನ್ನು ತೆಗೆದುಕೊಂಡು ಹೋಗಬೇಕು” ಎಂದು ಹೇಳಿದ್ದಾರೆ.
“ಅವರು ಆಸ್ಪತ್ರೆಯಿಂದ ಹೊರಬಂದಾಗ ನಾನು ನೋಡಿದೆ. ಅವರಿಗೆ ಚಾಕಿ ಇರಿತವಾಗಿತ್ತೇ ಅಥವಾ ಅವರು ನಟಿಸುತ್ತಿದ್ದಾರೆಯೇ ಎಂದು ನನಗೆ ಅನುಮಾನ ಕಾಡುತ್ತದೆ. ಏಕೆಂದರೆ ಅವರು ನಡೆಯುವಾಗ ನೃತ್ಯ ಮಾಡುತ್ತಿದ್ದರು” ರಾಣೆ ಹೇಳಿದ್ದಾರೆ.
ಎನ್ಸಿಪಿ ನಾಯಕರಾದ ಜಿತೇಂದ್ರ ಅವ್ಹಾದ್ ಮತ್ತು ಸುಪ್ರಿಯಾ ಸುಳೆ ಅವರ ವಿರುದ್ಧವೂ ರಾಣೆ ವಾಗ್ದಾಳಿ ನಡೆಸಿದ್ದು, “ಶಾರುಖ್ ಖಾನ್ ಅಥವಾ ಸೈಫ್ ಅಲಿ ಖಾನ್ನಂತಹ ಯಾವುದೇ ಖಾನ್ ಗಾಯಗೊಂಡಾಗ ಮಾತ್ರ ಅವರು ಕಾಳಜಿ ವಹಿಸುತ್ತಾರೆ. ಆಗ ಎಲ್ಲರೂ ಅದರ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಸುಶಾಂತ್ ಸಿಂಗ್ ರಜಪೂತ್ನಂತಹ ಹಿಂದೂ ನಟನಿಗೆ ಚಿತ್ರಹಿಂಸೆ ನೀಡಿದಾಗ, ಯಾರೂ ಏನನ್ನೂ ಹೇಳಲು ಮುಂದೆ ಬರುವುದಿಲ್ಲ. ಯಾವುದೇ ಹಿಂದೂ ಕಲಾವಿದನ ಬಗ್ಗೆ ಅವರು ಚಿಂತಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.