ಕೊನೆಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪಾಶ್ ಕಮಿಟಿ ರಚನೆ ಆಗಿದೆ. ರಾಜ್ಯ ಮಹಿಳಾ ಆಯೋಗ ಪಾಶ್ ಕಮಿಟಿ ರಚನೆ ಮಾಡುವಂತೆ 2-3 ಬಾರಿ ನೊಟೀಸ್ ನೀಡಿದ್ದರು ಹಿಂದೇಟು ಹಾಕಲಾಗಿತ್ತು. ಇದೀಗ ಒತ್ತಾಯಕ್ಕೆ ಮಣಿದು ಕೊನೆಗೂ ಕಮಿಟಿ ರಚನೆ ಮಾಡಿದೆ.
POSH ಎಂಬುದು ಲೈಂಗಿಕ ಕಿರುಕುಳ ತಡೆ ಸಮಿತಿಯಾಗಿದೆ. ಕೆಲಸ ಮಾಡುವ ಜಾಗದಲ್ಲಿ ಲೈಂಗಿಕ ಕಿರುಕುಳದ ದೂರುಗಳನ್ನು ತನಿಖೆ ಮಾಡುವ ಮತ್ತು ಪರಿಹರಿಸುವ ಸಮಿತಿ ಇದಾಗಿದೆ. ಭಾರತದ ಪ್ರತಿಯೊಂದು ಸಂಸ್ಥೆಗಳಲ್ಲೂ ಪಾಶ್ ಕಮಿಟಿ ರಚನೆ ಮಾಡುವುದು ಅಗತ್ಯವಿದೆ ಎಂಬ ಒತ್ತಾಯ ಕೇಳಿ ಬಂದಿದೆ.
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ ಅಲ್ಲಿ ಕಮಿಟಿಯೊಂದನ್ನು ರಚಿಸಲಾಗಿತ್ತು. ಹೀಗಾಗಿ ಕನ್ನಡ ಚಿತ್ರರಂಗದಲ್ಲೂ ಅಂಥದ್ದೆ ಕಮಿಟಿ ಬೇಕು ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಈ ಸಂಬಂಧ ರಾಜ್ಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಪಾಶ್ ಕಮಿಟಿ ರಚನೆಗೆ ಆದೇಶಿಸಿದ್ದರು.
ಪಾಶ್ ಕಮಿಟಿ ರಚನೆಗೆ ಮಹಿಳಾ ಆಯೋಗ ಮಧ್ಯಸ್ಥಿಕೆ ವಹಿಸಿದ ಬಳಿಕ ಪರ, ವಿರೋಧಗಳ ಚರ್ಚೆ ನಡೆದಿತ್ತು. ಇದಾದ ಬಳಿಕ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಒಟ್ಟು 7 ಸದಸ್ಯರು ಪಾಶ್ ಕಮಿಟಿಯನ್ನು ರಚನೆ ಮಾಡಿದೆ.
ಅನಿತಾ ರಾಣಿ ಅವರ ಅಧ್ಯಕ್ಷತೆಯಲ್ಲಿ ಸ್ಯಾಂಡಲ್ವುಡ್ ಪಾಶ್ ಕಮಿಟಿ ರಚನೆ ಆಗಿದೆ. ಸಮಿತಿಯಲ್ಲಿ ಎಂ. ನರಸಿಂಹಲು, ಎನ್.ಎನ್. ಕುಮಾರ್, ಸಾರಾ ಗೋವಿಂದು, ಎಂ.ಎನ್ ರಮೇಶ್, ಅನ್ನಪೂರ್ಣ, ಬಿ.ಎಲ್ ನಾಗಾರಾಜ್ ಅವರು ಸದಸ್ಯರಾಗಿದ್ದಾರೆ.