ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ್ದಾರೆ. ತಾವು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಅಧ್ಯಕ್ಷರ ಕಚೇರಿಯಲ್ಲಿ ಭಾರಿ ಬದಲಾವಣೆ ಮಾಡಿದ್ದಾರೆ. ಮರಳಿ ಅಧಿಕಾರದ ಗದ್ದುಗೆಯನ್ನೇರಿರುವ ಡೊನಾಲ್ಡ್ ಟ್ರಂಪ್ ಮೊದಲ ದಿನವೇ ತನ್ನ ಓವಲ್ ಕಚೇರಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ.
ಟ್ರಂಪ್ ಅವರ ಕಚೇರಿಯಲ್ಲಿ ಇದೀಗ ಆ್ಯಂಡ್ರೂ ಜಾಕ್ಸನ್ ಭಾವಚಿತ್ರ ಕಾಣಿಸಿಕೊಂಡಿದೆ. ಜಾಕ್ಸನ್ ಗುಲಾಮರ ಮಾಲಿಕರಾಗಿದ್ದರು ಮತ್ತು ಮೂಲನಿವಾಸಿ ಅಮೆರಿಕನ್ನರನ್ನು ಬಲವಂತದಿಂದ ಅವರ ಭೂಮಿಯಿಂದ ತೆರವುಗೊಳಿಸಲು ಕಾರಣರಾಗಿದ್ದರು ಎಂಬ ಕಾರಣದಿಂದ ಅವರ ಭಾವಚಿತ್ರವು ಈ ಹಿಂದೆ ವಿವಾದವನ್ನು ಸೃಷ್ಟಿಸಿತ್ತು. ಹಿನ್ನೆಲೆಯಲ್ಲಿ ಅದನ್ನು ತೆಗೆದು ಹಾಕಲಾಗಿತ್ತು. ತಾವು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಟ್ರಂಪ್ ಮತ್ತೆ ಆ್ಯಂಡ್ರೂ ಅವರ ಭಾವ ಚಿತ್ರವನ್ನು ಕಚೇರಿಯಲ್ಲಿ ಹಾಕಿಸಿದ್ದಾರೆ.
ಓವಲ್ ಕಚೇರಿಯಲ್ಲಿ ಜಾರ್ಜ್ ವಾಷಿಂಗ್ಟನ್,ಅಲೆಕ್ಸಾಂಡರ್ ಹ್ಯಾಮಿಲ್ಟನ್ ಮತ್ತು ಥಾಮಸ್ ಜೆಫರ್ಸನ್ ಅವರ ಚಿತ್ರಗಳನ್ನೂ ಪ್ರದರ್ಶಿಸಲಾಗಿದೆ.
ವಿನ್ಸ್ಟನ್ ಚರ್ಚಿಲ್ ಅವರ ಎದೆಮಟ್ಟದ ಪ್ರತಿಮೆಯು ತನ್ನ ಹಿಂದಿನ ಸ್ಥಾನಕ್ಕೆ ಮರಳಿದ್ದರೆ,ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಪ್ರತಿಮೆ ಯಥಾಸ್ಥಿತಿಯಲ್ಲಿ ಉಳಿದುಕೊಂಡಿದೆ. ಬೈಡೆನ್ ಅಧಿಕಾರಾವಧಿಯಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗಿದ್ದ ರಾಬರ್ಟ್ ಎಫ್.ಕೆನೆಡಿ ಅವರ ಪ್ರತಿಮೆಯನ್ನು ಟ್ರಂಪ್ ತೆಗೆದುಹಾಕಿದ್ದಾರೆ.