ರಿಷಬ್ ಶೆಟ್ಟಿ, ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕಾಂತಾರ ಚಾಪ್ಟರ್ 1 ಚಿತ್ರತಂಡದ ವಿರುದ್ಧ ಇತ್ತೀಚೆಗೆ ಅರಣ್ಯ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿತ್ತು. ಶೂಟಿಂಗ್ ವೇಳೆ ಕಾಡಿನಲ್ಲಿ ಬೆಂಕಿ ಹಚ್ಚಿ ಸಾಕಷ್ಟು ಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಇದೀಗ ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು ತಂಡಕ್ಕೆ ಸಂಪೂರ್ಣ ಕ್ಲೀನ್ ಚಿಟ್ ಸಿಕ್ಕಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೇರೂರು ಗ್ರಾಮದ ಸಮೀಪ ಇರುವ ಗವಿಗುಡ್ಡ ಪ್ರದೇಶದ ಡೀಮ್ಡ್ ಅರಣ್ಯ ಹಾಗು ಗೋಮಾಳ ಜಮೀನಿನಲ್ಲಿ ಚಿತ್ರೀಕರಣ ಮಾಡಲು ಕಾಂತಾರ ತಂಡ ಅನುಮತಿ ಪಡೆದಿಕೊಂಡಿತ್ತು. ತಂಡದವರು ಅಕ್ರಮವಾಗಿ ಮರಕಡಿದು, ಸ್ಫೋಟಕ ಬಳಸಿ, ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಕೆಲ ಸ್ಥಳೀಯರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಅರಣ್ಯಾಧಿಕಾರಿಗಳ ತಂಡ ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಕ್ಲೀನ್ ಚಿಟ್ ನೀಡಿದೆ.
‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣದ ವೇಳೆ ಬ್ಲಾಸ್ಟ್ ಮಾಡಲಾಗಿದೆ, ಮರಕಡಿಯಲಾಗಿದೆ, ಇದರಿಂದ ಕಾಡು ಪ್ರಾಣಿಗಳು ಗ್ರಾಮಗಳತ್ತ ನುಗ್ಗಿ ಬರುತ್ತಿವೆ. ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗುತ್ತಿದೆ ಎಂದು ಕೆಲವರು ಆರೋಪಿಸಿದ್ದರು. ಈ ಸಂಬಂಧ ಕೆಲ ಫೋಟೊಗಳು ಕೂಡ ವೈರಲ್ ಆಗಿತ್ತು. ಇದೀಗ ಚಿತ್ರತಂಡಕ್ಕೆ ಕ್ಲೀನ್ ಚಿಟ್ ಸಿಕ್ಕಿದ್ದು ಇದೀಗ ಚಿತ್ರತಂಡ ಯಾವುದೇ ಅಡ್ಡಿ ಆತಂಕ ಇಲ್ಲದೆ ಶೂಟಿಂಗ್ ನಡೆಸುತ್ತಿದೆ.