ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಸಹಜ. ಅದು ಲವ್ ಮ್ಯಾರೇಜ್ ಆಗಿರಲಿ ಅಥವಾ ಆರೆಂಜ್ಡ್ ಮ್ಯಾರೇಜ್ ಆಗಿರಲು ಗಂಡ ಹೆಂಡತಿ ಜಗಳ ಆಡುವುದು ಸಾಮಾನ್ಯ. ಅದೇನೇ ಇರಲಿ ಗಂಡ-ಹೆಂಡತಿ ಜಗಳ ಉಂಡು ಮಲಗುವವರೆಗೂ ಎಂಬ ಗಾದೆಯೇ ಇದೆ. ಇಂತಹ ಸಮಯದಲ್ಲಿ ಯಾವುದೇ ಸಂಬಂಧವಾಗಿರಲಿ ಅಥವಾ ವೈವಾಹಿಕ ಜೀವನವಾಗಿರಲಿ,
ಅಲ್ಲಿ ಕೆಲವು ನಿಯಮಗಳನ್ನು ಪಾಲಿಸಿಕೊಂಡು ಹೋಗುವುದು ಅನಿವಾರ್ಯವಾಗಿದೆ. ಯಾಕೆಂದರೆ ಯಶಸ್ವಿ ಜೀವನಕ್ಕೆ ಕೆಲವು ಸೂತ್ರಗಳನ್ನು ಪಾಲಿಸಬೇಕಾಗುತ್ತದೆ. ಈ ಸೂತ್ರಗಳು ವೈವಾಹಿಕ ಜೀವನ ಯಶಸ್ವಿಗೊಳಿಸಲು ಸಹಕಾರಿ ಆಗಿದೆ. ಅಂತಹ ಐದು ಸೂತ್ರಗಳ ಬಗ್ಗೆ ತಿಳಿಯಿರಿ.
ನಿಮ್ಮ ಸಂಗಾತಿಗೆ ಸಾಕಷ್ಟು ಸಮಯವನ್ನು ನೀಡಿ: ಪ್ರತಿ ಸಂಬಂಧವು ಬಲಪಡಿಸುವ ಅಸ್ತ್ರವೇ ಈ ಸಮಯ. ಒಬ್ಬರಿಗೊಬ್ಬರು ಸಮಯ ನೀಡುವುದು ಸಂಬಂಧವನ್ನು ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಉದ್ಯೋಗಸ್ಥ ದಂಪತಿಗಳಿಗೆ ಪರಸ್ಪರ ಒಟ್ಟಿಗೆ ಕಳೆಯಲು ಸಮಯವೇ ಇಲ್ಲ. ಇದರಿಂದ ಪತಿ-ಪತ್ನಿಯರ ನಡುವಿನ ಅಂತರವು ಹೆಚ್ಚಾಗುತ್ತದೆ. ಹೀಗಾಗಿಯೇ ಸಂಬಂಧವು ಮತ್ತಷ್ಟು ದುರ್ಬಲಗೊಳ್ಳುತ್ತದೆ. ಈ ಕಾರಣದಿಂದ ನಿಮ್ಮ ಸಂಗಾತಿಗಾಗಿ ಸಮಯ ಮೀಸಲಿಡಲು ಪ್ರಯತ್ನಿಸಿ.
ಸಂಭಾಷಣೆ ಅಗತ್ಯ: ದಂಪತಿಗಳಿಬ್ಬರೂ ಜಗಳವಾಡುವ ಸಮಯದಲ್ಲಿ ಒಬ್ಬರು ಮೌನವಾಗಿರುವುದು ಅತ್ಯವಶ್ಯಕ. ಇಲ್ಲದಿದ್ದರೆ ಮಾತಿಗೆ ಮಾತು ಬೆಳೆದು ವೈವಾಹಿಕ ಜೀವನವು ಹಾಳಾಗುತ್ತದೆ. ಅದಲ್ಲದೇ, ನಿಮ್ಮ ಸಂಗಾತಿಯೂ ಏನಾದರೂ ಕೋಪಮಾಡಿಕೊಂಡಿದ್ದರೆ ಪ್ರೀತಿಯ ಸಂಭಾಷಣೆಯ ಮೂಲಕ ಕೋಪವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ನಾನೇಕೆ ಮಾತನಾಡಲಿ ಎನ್ನುವ ಅಹಂ ಭಾವವು ಬಂದರೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತವೆ.ಹೀಗಾಗಿ ಸಂಭಾಷಣೆಯಿಂದ ಎಲ್ಲವನ್ನು ಬಗೆಹರಿಸಿಕೊಳ್ಳುವುದು ಮುಖ್ಯ.
ತಪ್ಪನ್ನು ಒಪ್ಪಿಕೊಳ್ಳುವ ಗುಣವಿರಲಿ : ತಪ್ಪು ಯಾರಿಂದ ಆಗಲ್ಲ ಹೇಳಿ, ಕೆಲವೊಮ್ಮೆ ತಿಳಿದೋ ತಿಳಿಯದೇನೋ ತಪ್ಪುಗಳಾಗುತ್ತದೆ. ಇದರಿಂದಲೇ ಎಷ್ಟೋ ಸಲ ಸಂಗಾತಿಯ ಮನಸ್ಸಿಗೆ ನೋವಾಗುತ್ತದೆ. ಈ ಸಂದರ್ಭದಲ್ಲಿ ಸಂಗಾತಿಯ ಬಳಿ ಕ್ಷಮಿಸಿ ಎಂದು ಹೇಳಲು ಹಿಂಜರಿಯಬಾರದು. ಕ್ಷಮಿಸಿ ಎಂದು ಕೇಳುವುದರಿಂದ ಸಂಬಂಧದಲ್ಲಿ ಬಿರುಕು ಮೂಡುವುದಿಲ್ಲ. ಸಂಗಾತಿಗಳಿಬ್ಬರೂ ಈ ಕೆಲ ವಿಷಯಗಳ ಬಗ್ಗೆ ಗಮನಹರಿಸಿದರೆ ದಾಂಪತ್ಯ ಜೀವನವು ಸುಖಕರವಾಗಿರಲು ಸಾಧ್ಯವಾಗುತ್ತದೆ.
ಉತ್ತಮ ಸ್ನೇಹಿತರಾಗಿ: ನಿಮ್ಮ ಜೀವನದಲ್ಲಿ ನಿಮ್ಮ ಸಂಗಾತಿಯು ಪ್ರಮುಖ ಪಾತ್ರ ವಹಿಸುತ್ತಾರೆ. ನಿಮ್ಮ ಹೊಸ ಬಾಳಿನ ಹಾದಿಯಲ್ಲಿ ಅವರು ಸದಾ ಜೊತೆ ನಡೆಯುತ್ತಾರೆ. ಹೀಗಾಗಿ ಅವರಿಗೆ ತುಂಬಾ ಪ್ರಾಮುಖ್ಯತೆ ಕೊಡಿ. ಅವರೊಂದಿಗೆ ಸ್ನೇಹಿತರಂತೆ (Friends) ಇದ್ದು, ನಿಮ್ಮ ಪ್ರತಿಯೊಂದು ಸಣ್ಣ-ಪುಟ್ಟ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಸಂತೋಷ ಮತ್ತು ದುಃಖವನ್ನು ಹಂಚಿಕೊಳ್ಳುತ್ತಿರಿ. ನಿಮ್ಮ ಚಿಂತೆಗೆ ಕಾರಣವಾದ ವಿಷಯಗಳನ್ನೂ ಸಹ ಅವರಿಗೆ ತಿಳಿಸಿ. ಇದು ನಿಮ್ಮ ಒತ್ತಡವನ್ನು (Stress)ಕಡಿಮೆ ಮಾಡುವುದರ ಜತೆ ಮತ್ತು ನೀವು ಅವರನ್ನು ಎಷ್ಟು ನಂಬಿದ್ದೀರಿ ಎಂದು ತಿಳಿಸುತ್ತದೆ.