ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪಟೌಡಿ ಕುಟುಂಬಕ್ಕೆ ಸೇರಿದ 15 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಶೀಘ್ರದಲ್ಲೇ ಕೇಂದ್ರ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ.
ಕೊಹೆಫಿಜಾ ಪ್ರದೇಶದಿಂದ ಭೋಪಾಲ್ನ ಚಿಕ್ಲೋಡ್ವರೆಗೆ ಸೈಫ್ ಅಲಿ ಖಾನ್ ಅವರ ಪಟೌಡಿ ಕುಟುಂಬದ ಪೂರ್ವಿಕರ ಆಸ್ತಿ ವಿಸ್ತರಿಸಿದೆ. ಇದನ್ನು ಶತ್ರು ಆಸ್ತಿ ಎಂದು 2014ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದು ಈ ಆಸ್ತಿ ಮೇಲೆ ಪಟೌಡಿ ಕುಟುಂಬದ ಉತ್ತರಾಧಿಕಾರಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ಈ ಆಸ್ತಿಗಳ ಮೇಲೆ 2015 ರಲ್ಲಿ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ಮಧ್ಯಪ್ರದೇಶ ಹೈಕೋರ್ಟ್ ತೆಗೆದುಹಾಕಿದೆ. ಇದರಿಂದಾಗಿ 1968ರ ಶತ್ರು ಆಸ್ತಿ ಕಾಯ್ದೆಯ ಅಡಿಯಲ್ಲಿ ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಇದೆ.
1968ರ ಶತ್ರು ಆಸ್ತಿ ಕಾಯ್ದೆಯ ಪ್ರಕಾರ, 1947 ರ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದ ವ್ಯಕ್ತಿಗಳ ಒಡೆತನದ ಆಸ್ತಿಯನ್ನು ಕೇಂದ್ರ ಸರ್ಕಾರವು ಹಕ್ಕು ಸಾಧಿಸಬಹುದಾಗಿದೆ. ಡಿ. 13 ರಂದು ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, 2017ರ ತಿದ್ದುಪಡಿ ಮಾಡಿದ ಶತ್ರು ಆಸ್ತಿ ಕಾಯ್ದೆ ಅಡಿ ಶಾಸನಬದ್ಧ ಪರಿಹಾರವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 30 ದಿನಗಳಲ್ಲಿ ಪ್ರಾತಿನಿಧ್ಯ ಸಲ್ಲಿಸಬೇಕೆಂದು ಪಟೌಡಿ ಕುಟುಂಬಕ್ಕೆ ಸೂಚಿಸಿತ್ತು. ಇಂದಿನಿಂದ ಈ ಆದೇಶಕ್ಕೆ ಸಂಬಂಧಿಸಿಂತೆ 30 ದಿನಗಳ ಒಳಗಡೆ ಮೇಲ್ಮನವಿ ಸಲ್ಲಿಸದಿದ್ದರೆ ಕೋರ್ಟ್ ಆದೇಶ ಪ್ರಕಟಿಸುವುದಿಲ್ಲ. ಒಂದು ವೇಳೆ ಸಲ್ಲಿಸದಿದ್ದರೆ ಕೋರ್ಟ್ ತನ್ನದೇ ಆದ ಅರ್ಹತೆಯ ಆಧಾರದ ಮೇಲೆ ಮೇಲ್ಮನವಿಯನ್ನು ಪರಿಗಣಿಸುತ್ತದೆ ಎಂದು ಹೇಳಿತ್ತು.
ಭೋಪಾಲ್ನ ಮಾಜಿ ನವಾಬರಿಗೆ ಸೇರಿದ್ದ, ನಟ, ಈಗಿನ ನವಾಬ ಸೈಫ್ ಅಲಿ ಖಾನ್ ಅವರಿಗೆ ಸೇರಿದ ಆಸ್ತಿಯನ್ನೂ 2015ರಲ್ಲಿ ‘ಶತ್ರುವಿನ ಸೊತ್ತು’ಗಳ ಪಟ್ಟಿಗೆ ಸೇರಿಸಲಾಗಿದೆ. ಸರ್ಕಾರ ಈ ಧೋರಣೆಯನ್ನು ಪ್ರಶ್ನಿಸಿ ಸೈಫ್ ಅಲಿ ಖಾನ್ ಅವರು 2015ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಇಲ್ಲಿಯವರೆಗೆ ಆಸ್ತಿ ವಶಪಡಿಸಲು ಕೋರ್ಟ್ ತಡೆಯಾಜ್ಞೆ ನೀಡಿತ್ತು.
ಭಾರತ ಸ್ವಾತಂತ್ರ್ಯ ಪಡೆಯುವಾಗ 1947 ರಲ್ಲಿ ಭೋಪಾಲ್ ರಾಜಪ್ರಭುತ್ವದ ರಾಜ್ಯವಾಗಿತ್ತು ಮತ್ತು ನವಾಬ್ ಹಮೀದುಲ್ಲಾ ಖಾನ್ ಅದರ ಕೊನೆಯ ನವಾಬ್ ಆಗಿದ್ದರು. ನವಾಬ್ ಹಮೀದುಲ್ಲಾ ಖಾನ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದರು ಅವರಲ್ಲಿ ಅಬಿದಾ ಸುಲ್ತಾನ್ 1950 ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು.
1960ರ ದಶಕದವರೆಗೂ ಬದುಕಿದ್ದ ಹಮೀದುಲ್ಲಾ ಅವರು ತಮ್ಮ ಇನ್ನೊಬ್ಬ ಪುತ್ರಿ, ಮನ್ಸೂರ್ ಅಲಿ ಖಾನ್ ಪಟೌಡಿ ಅವರ ತಾಯಿ ಸಜೀದಾ ಸುಲ್ತಾನಾ ಅವರನ್ನು ತಮ್ಮ ಆಸ್ತಿಯ ಉತ್ತರಾಧಿಕಾರಿ ಎಂದು ಘೋಷಿಸಿದ್ದರು. ಸಾಜಿದಾ ಸುಲ್ತಾನ್ ಭಾರತದಲ್ಲಿಯೇ ಇದ್ದು ಇಫ್ತಿಕರ್ ಅಲಿ ಖಾನ್ ಪಟೌಡಿ( ಸೈಫ್ ಅಲಿಖಾನ್ ಅವರ ಅಜ್ಜ, ಮನ್ಸೂರ್ ಅಲಿಖಾನ್ ಅವರ ತಂದೆ) ಅವರನ್ನು ವಿವಾಹವಾದರು. ನ್ಯಾಯಾಲಯವು ಸಾಜಿದಾ ಸುಲ್ತಾನ್ ಅವರನ್ನು ಕಾನೂನುಬದ್ಧ ಉತ್ತರಾಧಿಕಾರಿಯಾಗಿ ಗುರುತಿಸಿತ್ತು ಮತ್ತು ಸೈಫ್ ಅಲಿ ಖಾನ್ ಆಸ್ತಿಯಲ್ಲಿ ಪಾಲನ್ನು ಪಡೆದರು.
ಪಾಕಿಸ್ತಾನದಲ್ಲೂ ಭಾರತೀಯ ಪ್ರಜೆಗಳಿಗೆ ಸೇರಿದ್ದ ಆಸ್ತಿ ಇತ್ತು. ಅಲ್ಲಿನ ಸರ್ಕಾರವು ಈಗಾಗಲೇ ಅವುಗಳನ್ನು ವಿಲೇವಾರಿ ಮಾಡಿ ಸರ್ಕಾರ ವಶಕ್ಕೆ ಪಡೆದಿದೆ.