ತೆಲುಗು ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತಿ ಘಳಿಸಿರುವ ವೇಣು ಸ್ವಾಮಿ ಇದೀಗ ಬಹಿರಂಗ ಕ್ಷಮೆ ಕೇಳಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಟ, ನಟಿಯರ ಭವಿಷ್ಯ, ರಾಜಕೀಯ ವ್ಯಕ್ತಿಗಳ ಭವಿಷ್ಯ ಹೇಳುತ್ತಿದ್ದ ವೇಣು ಸ್ವಾಮಿ ಇತ್ತೀಚೆಗೆ ನಾಗಚೈತನ್ಯ ಹಾಗೂ ಶೋಭೀತಾ ಮದುವೆ ಬಗ್ಗೆ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಈ ಹಿಂದೆ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಸಮಯದಲ್ಲಿ ಭವಿಷ್ಯ ನುಡಿದಿದ್ದ ವೇಣು ಸ್ವಾಮಿ, ಜಗನ್ ಭಾರಿ ವಿಜಯ ಗಳಿಸಿ ಅಧಿಕಾರಕ್ಕೆ ಏರುತ್ತಾರೆ ಎಂದಿದ್ದರು. ಆದರೆ ಜಗನ್ ಹೀನಾಯ ಸೋಲು ಕಂಡರು. ಆಗ ವೇಣು ಸ್ವಾಮಿ, ಇನ್ನು ಮುಂದೆ ತಾನು ಭವಿಷ್ಯ ನುಡಿಯುವುದಿಲ್ಲ ಎಂದಿದ್ದರು. ಆದರೆ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಅವರುಗಳ ನಿಶ್ಚಿತಾರ್ಥ ಆದ ಬಳಿಕ ಮತ್ತೆ ಯೂಟ್ಯೂಬ್ ಚಾನೆಲ್ಗಳಲ್ಲಿ ಪ್ರತ್ಯಕ್ಷವಾದ ವೇಣು ಸ್ವಾಮಿ, ನಾಗ ಚೈತನ್ಯ ಮತ್ತು ಶೋಭಿತಾ ವಿಚ್ಛೇದನ ಪಡೆದುಕೊಳ್ಳುತ್ತಾರೆ. ಅವರ ದಾಂಪತ್ಯ ಜೀವನ ಹೆಚ್ಚು ಸಮಯ ಉಳಿಯುವುದಿಲ್ಲ ಎಂದು ಹೇಳಿದ್ದರು.
ಇದರ ಜೊತೆಗೆ ಶೋಭಿತಾ ಧುಲಿಪಾಲ ಬಗ್ಗೆ ನೆಗೆಟಿವ್ ಆಗಿಯೇ ಮಾತನಾಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು, ಸ್ವತಃ ನಾಗ ಚೈತನ್ಯ ಅವರೇ ವೇಣು ಸ್ವಾಮಿ ವಿರುದ್ಧ ದೂರು ನೀಡಿದ್ದರು. ಶೋಭಿತಾ ಬಗ್ಗೆ ಆಡಿರುವ ಮಾತುಗಳನ್ನು ಆಧರಿಸಿ ಮಹಿಳಾ ಆಯೋಗ ಸಹ ವೇಣು ಸ್ವಾಮಿಗೆ ನೊಟೀಸ್ ನೀಡಿತ್ತು. ಇದೀಗ ವೇಣು ಸ್ವಾಮಿ, ಮಹಿಳಾ ಆಯೋಗಕ್ಕೆ ಕ್ಷಮೆ ಕೇಳಿದ್ದಾರೆ.
ಮಹಿಳಾ ಆಯೋಗದ ನೊಟೀಸ್ಗೆ ವಿರುದ್ಧವಾಗಿ ಹೈಕೋರ್ಟ್ನಲ್ಲಿ ವೇಣು ಸ್ವಾಮಿ ಅರ್ಜಿ ಸಹ ದಾಖಲಿಸಿದ್ದರು. ಆದರೆ ಅಲ್ಲಿಯೂ ಸಹ ವೇಣು ಸ್ವಾಮಿಗೆ ಹಿನ್ನಡೆ ಆಗಿದ್ದು, ಖಡ್ಡಾಯವಾಗಿ ಮಹಿಳಾ ಆಯೋಗದ ಮುಂದೆ ಹಾಜರಾಗಬೇಕು ಎಂದು ಆದೇಶಿಸಿತ್ತು. ಹೈಕೋರ್ಟ್ನಲ್ಲಿ ಹಿನ್ನಡೆ ಉಂಟಾದ ಬೆನ್ನಲ್ಲೆ ಮಹಿಳಾ ಆಯೋಗದ ಮುಂದೆ ಕ್ಷಮೆ ಯಾಚಿಸಿರುವ ವೇಣು ಸ್ವಾಮಿ ಇನ್ನು ಮುಂದೆ ಮಹಿಳೆಯರಿಗೆ ಅಗೌರವ ಆಗುವ ರೀತಿಯ ಹೇಳಿಕೆಗಳನ್ನು ನೀಡುವುದಿಲ್ಲ ಎಂದಿದ್ದಾರೆ.