ಪ್ರತಿದಿನ ಲಕ್ಷಾಂತರ ಜನರು ರೈಲ್ವೆ ಮೂಲಕ ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಎಷ್ಟು ಜಾಗ್ರತೆ ವಹಿಸಿದ್ರೂ ಕಡಿಮೆಯೇ. ಏಕೆಂದ್ರೆ ರೈಲುಗಳಲ್ಲಿ ಈ ಕಳ್ಳರ ಕಾಟ ದಿನದಿಂದ ದಿನಕ್ಕೆ ತೀರಾ ಹೆಚ್ಚಾಗುತ್ತಿದೆ. ಅದಲ್ಲದೆ ಸುಮಾರು ಗಂಟೆಗಳ ಕಾಲ ಟ್ರೈನ್ನಲ್ಲಿ ಇರಬೇಕಾಗಿರುವುದರಿಂದ ಜನರು ತಮ್ಮ ಸಮಯವನ್ನು ಕಳೆಯಲು ಮೊಬೈಲ್ ಬಳಸುತ್ತಾ ಇರುತ್ತಾರೆ.
ಆದರೆ ಚಲಿಸುವ ರೈಲಿನಿಂದ ನಿಮ್ಮ ಫೋನ್ ಬಿದ್ದರೆ ಏನು ಗತಿ?. ಸಾಮಾನ್ಯ ಜನರು ನನ್ನ ಮೊಬೈಲ್ ಕಳೆದುಹೋಯಿತು ಎಂದು ಮೌನವಾಗಿ ಕುಳಿತು ಬಿಡುತ್ತಾರೆ. ಕೆಲವು ಜನರು ರೈಲಿನ ಚೈನ್ ಅನ್ನು ಎಳೆಯುತ್ತಾರೆ. ಆದರೆ ಈ ವಿಧಾನವು ಸರಿಯಾಗಿದೆಯೇ?. ನಿಮ್ಮ ಫೋನ್ ಅನ್ನು ಮರಳಿ ಪಡೆಯಲು ನೀವು ಏನು ಮಾಡಬೇಕು?.
ಚಲಿಸುತ್ತಿರುವ ರೈಲಿನಿಂದ ನಿಮ್ಮ ಫೋನ್ ಬಿದ್ದರೆ ಈ ಕ್ರಮಗಳನ್ನು ತೆಗೆದುಕೊಳ್ಳಿ
ಚಲಿಸುವ ರೈಲಿನಿಂದ ಫೋನ್ ಬಿದ್ದರೆ ನೀವು ಮೊದಲು ರೈಲ್ವೇ ಹಳಿಯ ಬದಿಯಲ್ಲಿ ಅಳವಡಿಸಿರುವ ಕಂಬದ ಮೇಲೆ ಬರೆದಿರುವ ಸಂಖ್ಯೆ ಅಥವಾ ಸೈಡ್ ಟ್ರಾಕ್ ಸಂಖ್ಯೆಯನ್ನು ಗಮನಿಸಬೇಕು. ಇದರ ನಂತರ, ನಿಮ್ಮ ಪಕ್ಕದಲ್ಲಿರುವ ಪ್ರಯಾಣಿಕರಿಂದ ಫೋನ್ ಕೇಳಿ ಆರ್ಪಿಎಫ್ ಮತ್ತು ಸಂಖ್ಯೆ 182 ಕ್ಕೆ ಮಾಹಿತಿಯನ್ನು ನೀಡಿ. ಈ ಸಮಯದಲ್ಲಿ, ಫೋನ್ ಯಾವ ಕಂಬ ಅಥವಾ ಟ್ರ್ಯಾಕ್ ಸಂಖ್ಯೆಯ ಬಳಿ ಬಿದ್ದಿದೆ ಎಂದು ತಿಳಿಸಿ.
ಹೀಗೆ ಮಾಡಿದರೆ ರೈಲ್ವೆ ಪೊಲೀಸರಿಗೆ ನಿಮ್ಮ ಫೋನ್ ಪತ್ತೆ ಮಾಡುವುದು ಸುಲಭವಾಗುತ್ತದೆ. ಅಲ್ಲದೆ ನಿಮ್ಮ ಫೋನ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಪೊಲೀಸರು ತಕ್ಷಣ ಅದೇ ಸ್ಥಳಕ್ಕೆ ತಲುಪಿ ಫೋನ್ ಹುಡುಕಲು ಪ್ರಾರಂಭಿಸುತ್ತಾರೆ. ಈ ಪ್ರಕ್ರಿಯೆಯ ನಂತರ ನಿಮ್ಮ ಫೋನ್ ಅನ್ನು ಕಾನೂನುಬದ್ಧವಾಗಿ ಮರಳಿ ಪಡೆಯಬಹುದು.
ಈ ಸಹಾಯವಾಣಿ ಸಂಖ್ಯೆಗಳನ್ನು ಸಹ ಸಂಪರ್ಕಿಸಬಹುದು
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ನ ಅಖಿಲ ಭಾರತ ಭದ್ರತಾ ಸಹಾಯವಾಣಿ ಸಂಖ್ಯೆ 182 ಆಗಿದೆ. ನೀವು ಯಾವುದೇ ಸಮಯದಲ್ಲಿ ಸಹಾಯಕ್ಕಾಗಿ ಈ ಸಂಖ್ಯೆಯನ್ನು ಬಳಸಬಹುದು. ಅದೇ ರೀತಿ, GRP ಯ ಸಹಾಯವಾಣಿ ಸಂಖ್ಯೆ 1512 ಆಗಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯವನ್ನು ಪಡೆಯಬಹುದು. ರೈಲ್ ಪ್ಯಾಸೆಂಜರ್ ಸಹಾಯವಾಣಿ ಸಂಖ್ಯೆ 138. ರೈಲು ಪ್ರಯಾಣದ ಸಮಯದಲ್ಲಿ ಯಾವುದೇ ಸಮಸ್ಯೆ ಉಂಟಾದರೆ, 1512 ಅನ್ನು ಡಯಲ್ ಮಾಡುವ ಮೂಲಕ ಸಹಾಯವನ್ನು ಪಡೆಯಬಹುದು.