ಬೆಂಗಳೂರು:- ಬೆಳಗಾವಿ ಸಮಾವೇಶ ಇದೊಂದು ಜಾತ್ರೆ ಎಂದು ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದಿರುವುದು 60% ವಸೂಲಿ ಮಾಡಿದ ನೆನಪಿನ ಜಾತ್ರೆಯೇ ಹೊರತು ಕಾಂಗ್ರೆಸ್ ಸಮಾವೇಶವಲ್ಲ.
ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಹೆಸರಲ್ಲಿ ಕಾಂಗ್ರೆಸ್ ಸಮಾವೇಶ ಮಾಡಲಾಗಿದೆ. ಗಾಂಧೀಜಿ ಬಗ್ಗೆ ಅಷ್ಟೊಂದು ಪ್ರೀತಿ ಇದ್ದರೆ, ಕಾಂಗ್ರೆಸ್ ಭವನಕ್ಕೆ ಗಾಂಧೀಜಿ ಅಥವಾ ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರಿಡಬೇಕಿತ್ತು. ಸೋನಿಯಾ ಗಾಂಧಿಯಾಗಲೀ, ರಾಹುಲ್ ಗಾಂಧಿಯಾಗಲೀ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಇವರಿಗೆ ಗಾಂಧೀಜಿಯ ಹೆಸರು ಹೇಳುವ ನೈತಿಕತೆ ಇಲ್ಲ. ಇದು 60 ಪರ್ಸೆಂಟ್ ವಸೂಲಿ ಮಾಡುವ ನೆನಪಿನ ಜಾತ್ರೆಯೇ ಹೊರತು ಸಮಾವೇಶವಲ್ಲ ಎಂದರು.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಹಸುವಿನ ಕೆಚ್ಚಲು ಕತ್ತರಿಸಿದ್ದು, ಬ್ಯಾಂಕ್ ದರೋಡೆ, ಮಹಿಳೆ ಮೇಲೆ ಅತ್ಯಾಚಾರ ಮೊದಲಾದ ಘಟನೆಗಳನ್ನು ಕಡೆಗಣಿಸಿ ಸರ್ಕಾರ ಸಮಾವೇಶ ಮಾಡಿದೆ. ಅಭಿವೃದ್ಧಿ ಬಗ್ಗೆ ಕೇಳಿದರೆ ಬಿಜೆಪಿ ಸರ್ಕಾರದ ಅವಧಿಗೆ ಹೋಲಿಸುತ್ತಾರೆ ಎಂದರೆ ಕಾಂಗ್ರೆಸ್ ಹೇಗೆ ಭಿನ್ನವಾಗುತ್ತದೆ? ಕಾಂಗ್ರೆಸ್ ಶಾಸಕರು ಕೂಡ ಅನುದಾನ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಗಾಂಧೀಜಿಯಂತೆ ಸರಳವಾಗಿರಬೇಕು ಎಂದು ಹೇಳಿದ್ದಾರೆ. ಆದರೆ ಕಟೌಟ್ಗಳ ವಿಜೃಂಭಣೆ ಅಲ್ಲಿ ಕಂಡುಬಂದಿದೆ. ಇದು ನಕಲಿ ಗಾಂಧಿಗಳ ಸಮಾವೇಶ ಎಂದರು.