ತಮಿಳು ಚಿತ್ರರಂಗದ ಖ್ಯಾತ ನಟ, ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ನಟಿಸಿದ್ದ ವಿನಾಯಕನ್ ಅವರ ವಿಡಿಯೋವೊಂದು ವೈರಲ್ ಆಗಿದೆ. ಸದಾ ಒಂದಲ್ಲಾ ಒಂದು ಕಾರಣಕ್ಕೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ವಿನಾಯಕನ್ ಇದೀಗ ನೆರೆಮನೆಯವರ ಎದುರು ಅಶ್ಲೀಲವಾಗಿ ವರ್ತಿಸಿದ್ದು ಸದ್ಯ ನಟನ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿನಾಯಕನ್ ನೆರೆಮನೆಯವರಿಗೆ ಬೈಯುತ್ತಾ ಅಶ್ಲೀಲವಾಗಿ ನಡೆದುಕೊಂಡಿರುವ ವಿಡಿಯೋ ವೈರಲ್ ಆಗಿದ್ದು ಅನೇಕರು ವಿನಾಯಕನ್ ಅವರ ವರ್ತನೆಯನ್ನು ಟೀಕಿಸಿದ್ದಾರೆ. ಮನೆಯ ಬಾಲ್ಕನಿಯಲ್ಲಿ ನೆರೆಮನೆಯವರಿಗೆ ಅಶ್ಲೀಲ ಪದಗಳಿಂದ ವಿನಾಯಕನ್ ನಿಂದಿಸಿದ್ದಾರೆ. ಈ ವೇಳೆ, ಸೊಂಟದ ಮೇಲಿಂದ ಲುಂಗಿ ಬಿದ್ದು ಹೋಗಿದ್ರೂ ಲೆಕ್ಕಿಸದೇ ಕುಡಿದು ಜಗಳಕ್ಕೆ ನಿಂತಿದ್ದಾರೆ. ನಟನ ಈ ನಡೆ ನೋಡಿದ ಅನೇಕರು ಇವರನ್ನು ಚಿತ್ರರಂಗದಿಂದ ನಿಷೇಧ ಮಾಡಿ ಎಂದು ಅಗ್ರಹಿಸಿದ್ದಾರೆ.
ಹಲವು ವರ್ಷಗಳಿಂದ ವಿನಾಯಕನ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಅತ್ಯುತ್ತಮ ನಟ ಎಂಬುದರಲ್ಲಿ ಅನುಮಾನವೇ ಇಲ್ಲ. ಕೇರಳ ರಾಜ್ಯ ಪ್ರಶಸ್ತಿ, ಫಿಲ್ಮ್ಫೇರ್ ಪ್ರಶಸ್ತಿಗಳು ಕೂಡ ಅವರಿಗೆ ಸಿಕ್ಕಿವೆ. ರಜನಿಕಾಂತ್ ನಟನೆ ‘ಜೈಲರ್’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವ ಮೂಲಕ ವಿನಾಯಕನ್ ಅವರು ಹೆಚ್ಚು ಖ್ಯಾತಿ ಗಳಿಸಿದರು.
‘ಒಬ್ಬ ವ್ಯಕ್ತಿಯಾಗಿ, ಸಿನಿಮಾ ನಟನಾಗಿ ನನಗೆ ಎಷ್ಟೋ ವಿಷಯಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನನ್ನಿಂದ ನೆಗೆಟಿವ್ ಎನರ್ಜಿ ಉಂಟಾಗಿದ್ದಕ್ಕೆ ನನ್ನ ಕಡೆಯಿಂದ ಜನರ ಬಳಿ ಕ್ಷಮೆ ಕೇಳುತ್ತೇನೆ. ಚರ್ಚೆ ಮುಂದುವರಿಯಲಿ’ ಎಂದು ವಿನಾಯಕನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಕೂಡ ನಟ ವಿನಾಯಕನ್ ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕುಡಿದು ರಂಪಾಟ ಮಾಡಿದ್ದರು. ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಇತ್ತೀಚೆಗೆ ವಿನಾಯಕನ್ ಒಂದಲ್ಲ ಒಂದು ಕಾರಣಕ್ಕೆ ವಿವಾದಗಳ ಮೂಲಕ ಸುದ್ದಿಯಾಗುತ್ತಲೆ ಇರುತ್ತಾರೆ.