ಹೂಸ್ಟನ್: ಟ್ರಂಪ್ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಹೊತ್ತಲ್ಲೆ ಟಿಕ್ ಟಾಕ್ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯುವುದಾಗಿ ಪ್ರಕಟಿಸಿದ್ದಾರೆ. ಇದೀಗ ಆಮೆರಿಕದಲ್ಲಿ ಟಿಕ್ ಟಾಕ್ ಕಾರ್ಯಾಚರಣೆ ಪುನಾರಂಭಗೊಂಡಿದೆ.
ಸಮಾವೇಶವೊಂದರಲ್ಲಿ ಭಾಗವಹಿಸಿ ಮಾತನಾಡಿದ ಟ್ರಂಪ್, ಅಧಿಕಾರ ವಹಿಸಿಕೊಂಡ ನಂತರ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ. ಅಮೆರಿಕದಲ್ಲಿ ಸುಮಾರು 170 ದಶಲಕ್ಷ ಮಂದಿ ಟಿಕ್ ಟಾಕ್ ಬಳಕೆದಾರರಿದ್ದಾರೆ.
“ಟಿಕ್ ಟಾಕ್ ಮತ್ತೆ ಬಂದಿದೆ. ನಿಮಗೆ ತಿಳಿದಿರಬಹುದು, ನಾನೂ ಟಿಕ್ ಟಾಕ್ ನಲ್ಲಿ ಕೆಲವು ವಿಡಿಯೊಗಳನ್ನು ಮಾಡಿದ್ದೇನೆ. ಟಿಕ್ ಟಾಕ್ ನಮಗೆ ಮತಗಳನ್ನು ತಂದುಕೊಟ್ಟಿದೆ. ನನಗೆ ಟಿಕ್ ಟಾಕ್ ಇಷ್ಟ” ಎಂದು ಟ್ರಂಪ್ ಹೇಳಿದ್ದಾರೆ.
“ನಾವು ಹಲವು ಮಂದಿಯ ಉದ್ಯೋಗ ಉಳಿಸಬೇಕಿದೆ. ನಮ್ಮ ಉದ್ಯಮವನ್ನು ಚೀನಾಗೆ ಬಿಟ್ಟುಕೊಡಲು ನಾವು ಸಿದ್ಧರಿಲ್ಲ. ನಮ್ಮ ಉದ್ಯಮವನ್ನು ಬೇರೆಯವರಿಗೆ ಬಿಟ್ಟುಕೊಡಲು ನಾವು ಬಯಸುವುದಿಲ್ಲ”. ಜಂಟಿ ಉದ್ಯಮವೇ ಟಿಕ್ ಟಾಕ್ ಸಮಸ್ಯೆಗೆ ಪರಿಹಾರ. ಶೇ. 50ರಷ್ಟು ಅಮೆರಿಕದ ಪಾಲು ಇರಬೇಕು ಎಂದು ನಾನು ಸೂಚಿಸಿದೆ. ಅದಕ್ಕೆ ಅವರು ಒಪ್ಪಿಕೊಂಡರು. ಹೀಗಾಗಿ ನಾನು ನಿಷೇಧ ಹಿಂಪಡೆವ ಭರವಸೆ ನೀಡಿದೆ” ಎಂದು ಟ್ರಂಪ್ ಹೇಳಿದ್ದಾರೆ.
“ನಾವು ಯಾವುದೇ ಬಂಡವಾಳ ಹೂಡುತ್ತಿಲ್ಲ. ನಾವು ಕೆಲವೊಂದು ಒಪ್ಪಿಗೆಗಳನ್ನು ಎದುರು ನೋಡುತ್ತಿದ್ದೇವೆ. ಅದು ಇಲ್ಲದೆ ಇದ್ದರೆ ಅವರು ಏನೂ ಮಾಡಲು ಆಗುವುದಿಲ್ಲ” ಎಂದು ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ನಿರ್ಧಾರಕ್ಕೆ ಟಿಕ್ ಟಾಕ್ ಧನ್ಯವಾದ ಸಲ್ಲಿಸಿದೆ. ಆ್ಯಪ್ ಸೇವೆಗಳನ್ನು ಪುನಾರಂಭಿಸಲು ಸ್ಪಷ್ಟತೆ ಹಾಗೂ ಭರವಸೆ ನೀಡಿದ್ದಕ್ಕೆ ಕೃತಜ್ಞತೆ ತಿಳಿಸಿದೆ.