ಬೆಳಗಾವಿ: ಕುಂದಾನಗರಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ನಾಳೆ ನಡೆಯಲಿರೋ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಹೆಸರಿನಡಿ ಕಾಂಗ್ರೆಸ್ ಸಮಾವೇಶ ನಡೆಯಲಿದ್ದು, ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ಸಮಾವೇಶಕ್ಕೆ ಸಿದ್ದತೆ ನಡೆಸಲಾಗಿದೆ. ಸರ್ಕಾರಿ ಮತ್ತು ಪಕ್ಷದ ಕಾರ್ಯಕ್ರಮ ಎರಡನ್ನು ಸಹ ಪ್ರತ್ಯೇಕವಾಗಿ ಆಯೋಜನೆ ಮಾಡಲಾಗಿದೆ.
ಬಿಜೆಪಿ ವಿರುದ್ಧ ದೇಶಾದ್ಯಂತ ಹೋರಾಟಕ್ಕೆ ಬೆಳಗಾವಿಯಿಂದಲೇ ಚಾಲನೆ ನೀಡಲಿದ್ದು, ನಗರದ ರಸ್ತೆಗಳಲ್ಲಿ ಕಾಂಗ್ರೆಸ್ ಬಾವುಟ, ಬ್ಯಾನರ್, ಕಟೌಟಗಳು ರಾರಾಜಿಸುತ್ತಿವೆ. ಜ.21 ರಂದು ಬೆಳಗ್ಗೆ ಸುವರ್ಣ ವಿಧಾನ ಸೌಧದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆ ಅನಾವರಣಗೊಳಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧಿ ಪುತ್ಥಳಿ ಲೋಕಾರ್ಪಣೆ ಮಾಡಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿ ಪಕ್ಷಾತೀತವಾಗಿ ಕಾಂಗ್ರೆಸ್, ಬಿಜೆಪಿ ಶಾಸಕರು, ಸಂಸದರಿಗೆ ಆಹ್ವಾನ ನೀಡಲಾಗಿದೆ. ಆ ಬಳಿಕ ಬಹಿರಂಗ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ.
ಕಾಂಗ್ರೆಸ್ ಸಮಾವೇಶ ಬೆನ್ನಲ್ಲೇ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಿದ್ದಾರೆ. ಇನ್ನೂ ಕಾಂಗ್ರೆಸ್ ಸಮಾವೇಶಕ್ಕೆ ಎರಡು ಲಕ್ಷ ಜನರನ್ನು ಸೇರಿಸಲು ಕಾಂಗ್ರೆಸ್ ಶಾಸಕರಿಗೆ ಟಾಸ್ಕ್ ನೀಡಲಾಗಿದೆ. ಇನ್ನೊಂದೆಡೆ ಕಾರ್ಯಕ್ರಮ ಯಶಸ್ಸಿಗೊಳಿಸಲು ಕೈ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ, ಸತೀಶ್ ಜಾರಕಿಹೊಳಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಅಂತಿಮ ಹಂತದ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ.