ರಾಜ್ಯದಲ್ಲಿ ಅತಿದೊಡ್ಡ ಕುಖ್ಯಾತಿ ಪಡೆದಿರುವ ಪರಪ್ಪನ ಅಗ್ರಹಾರ ಕಾರಾಗೃಹ ವಿಭಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ತೋರಿದ್ದು, ಕೆಲವೇ ದಿನಗಳಲ್ಲಿ ಜೈಲು ಮೂರು ಭಾಗವಾಗಿ ಹೋಳಾಗಲಿದೆ. ಈ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತರುವ ಜೊತೆಗೆ ಅಕ್ರಮ ಚಟುವಟಿಕೆಗೆ ಶಾಶ್ವತ ಕಡಿವಾಣ ಹಾಕಲು ಮುಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಗಾಗಿ ಪರಪ್ಪನ ಅಗ್ರಹಾರ ಜೈಲು ಅಕ್ರಮ ಚಟುವಟಿಕೆಯ ತಾಣವಾಗಿದೆ. ಜೈಲಿಗೆ ಅಂಟಿರುವ ಕಪ್ಪುಚುಕ್ಕೆ ತೊಡೆದುಹಾಕಲು ಆಡಳಿತಾತ್ಮಕವಾಗಿ ಜೈಲನ್ನ ಮೂರು ಭಾಗವಾಗಿ ವಿಭಜಿಸಬೇಕೆಂದು ಕಾರಾಗೃಹ ಹಾಗೂ ಸುಧಾರಣೆ ಸೇವೆ ಇಲಾಖೆಯು ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸರ್ಕಾರ ಅಸ್ತು ಎಂದಿದ್ದು, ಶೀಘ್ರದಲ್ಲಿ ಜೈಲು ಮೂರು ಹೋಳಾಗಿ ವಿಭಜನೆಯಾಗಲಿದೆ.
IT ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 40,000 ಫ್ರೆಶರ್ʼಗಳ ನೇಮಕದ ಚಿಂತನೆಯಲ್ಲಿದೆ TCS
ರಾಜ್ಯದಲ್ಲಿ 9 ಕೇಂದ್ರ ಕಾರಾಗೃಹ, 21 ಜಿಲ್ಲಾ, 23 ತಾಲೂಕು ಹಾಗೂ ಒಂದು ಬಯಲು ಬಂಧೀಖಾನೆ ಸೇರಿದಂತೆ ಒಟ್ಟು 54 ಕಾರಾಗೃಹಗಳಿವೆ. ರಾಜ್ಯದಲ್ಲಿ ಸಜಾಬಂಧಿ ಹಾಗೂ ವಿಚಾರಣಾಧೀನ ಬಂಧಿ ಸೇರಿ ಒಟ್ಟು 14,645 ಕೈದಿಗಳಿದ್ದಾರೆ. ಈ ಪೈಕಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ 4,994 ಕೈದಿಗಳಿದ್ದಾರೆ. ದಿನೇ ದಿನೆ ಬಿಡುಗಡೆಯಾಗುವವರಿಗಿಂತ ಜೈಲಿಗೆ ಪ್ರವೇಶಿಸುವ ಆರೋಪಿಗಳ ಸಂಖ್ಯೆ ಅಧಿಕವಾಗುತ್ತಿದೆ. ನಿಗದಿಗಿಂತ ಜೈಲಿನಲ್ಲಿ 1 ಸಾವಿರ ಮಂದಿ ಹೆಚ್ಚಾಗಿದ್ದು, ಬಂಧಿಗಳ ಅಕ್ರಮ ಚಟುವಟಿಕೆ ಮೇಲೆ ಕಣ್ಣಿಡುವುದು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ ಸರ್ಕಾರ ಆದೇಶದಂತೆ ಸಜಾಬಂಧಿ, ವಿಚಾರಣಾಧೀನ ಹಾಗೂ ಮಹಿಳಾ ಕೈದಿ ಎಂಬಂತೆ ಮೂರು ವಿಭಾಗಗಳಾಗಿ ವಿಂಗಡಣೆಯಾಗಲಿದೆ.
ಬಂಧಿಗಳ ನಡುವೆ ತಡೆಗೋಡೆ ನಿರ್ಮಾಣ
ಸುಮಾರು 40 ಎಕರೆ ಪ್ರದೇಶ ಒಳಗೊಂಡಿರುವ ಸೆಂಟ್ರಲ್ ಜೈಲಿನಲ್ಲಿ 1,068 ಸಜಾಬಂಧಿ, 3,926 ವಿಚಾರಣಾಧೀನ ಹಾಗೂ 205 ಮಹಿಳಾ ಬಂಧಿ ಸೇರಿ ಒಟ್ಟು 4,994 ಮಂದಿ ಕೈದಿಗಳಿದ್ದಾರೆ. ಭಯೋತ್ಪಾದನೆ ಸೇರಿದಂತೆ ಘೋರ ಅಪರಾಧ ಕೃತ್ಯವೆಸಗಿರುವವರಿಗಾಗಿ ಪ್ರತ್ಯೇಕ ಹೈ ಸೆಕ್ಯೂರಿಟಿ ಕಾರಾಗೃಹವು ಸೆಂಟ್ರಲ್ ಜೈಲಿನ ಪಕ್ಕದಲ್ಲಿ ನಿರ್ಮಿಸಲಾಗುತ್ತಿದೆ. ಮತ್ತೊಂದೆಡೆ ಪ್ರಸ್ತಾಪಿಸಲಾಗಿರುವ ಶಿಕ್ಷಾಬಂಧಿ, ವಿಚಾರಣಾಧೀನ ಹಾಗೂ ಮಹಿಳಾ ಬಂಧಿಗಳನ್ನ ಪ್ರತ್ಯೇಕವಾಗಿ ಇರಿಸಲಾಗುತ್ತಿದೆ. ಇದಕ್ಕಾಗಿ ಕೈದಿಗಳ ನಡುವೆ ತಡೆಗೋಡೆ ನಿರ್ಮಾಣಕ್ಕಾಗಿ ಸರ್ಕಾರ 70 ಲಕ್ಷ ಅನುದಾನ ಮಂಜೂರು ಮಾಡಿದ್ದು, ವಿಭಜನೆ ಕಾರ್ಯ ಚುರುಕುಗೊಳಿಸಿರುವುದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ಹೋಳಾಗಿ ವಿಭಜನೆಯಾಗುವುದರಿಂದ ಅಧಿಕಾರಿ ಹಾಗೂ ಸಿಬ್ಬಂದಿ ಸಹ ಪ್ರತ್ಯೇಕವಾಗಲಿದ್ದಾರೆ. ಇದು ಜೈಲಿನ ಭದ್ರತೆ ಜೊತೆಗೆ ಪಾರದರ್ಶಕತೆಗೆ ಮುನ್ನುಡಿಯಾಗಲಿದೆ. ಹಣ ನೀಡಿದರೆ ಡ್ರಗ್ ಜೊತೆಗೆ ಬೇಕಾದ ವಸ್ತುಗಳು ಹಾಗೂ ಐಷರಾಮಿ ಸೌಲಭ್ಯಗಳು ಸಿಗಲಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಇತ್ತೀಚೆಗೆ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಪ್ರಕರಣ ತಾಜಾ ಉದಾಹರಣೆಯಾಗಿದೆ.
ಸದ್ಯ ಶಿಕ್ಷಾಬಂಧಿ, ವಿಚಾರಣಾಧೀನ ಕೈದಿಗಳು ಪ್ರತ್ಯೇಕ ಬ್ಯಾರಕ್ ನಲ್ಲಿ ಇರಿಸಲಾಗಿದ್ದರೂ ಊಟ, ಅಡುಗೆಮನೆ ಹಾಗೂ ಆಸ್ಪತ್ರೆ ಕಾರಣಕ್ಕಾಗಿ ಹೊರಗೆ ಬರಲೇಬೇಕಿದೆ. ಈ ವೇಳೆ ಸಜಾಬಂಧಿಗಳು ಹಾಗೂ ವಿಚಾರಣಾಕೈದಿಗಳು ಪರಸ್ಪರ ಎದುರಾಗಲಿದ್ದಾರೆ. ಇದು ಅಪರಾಧ ಸಂಚು ರೂಪಿಸಲು ಸಾಧ್ಯತೆಯಿದೆ. ಹೀಗಾಗಿ ಪ್ರತ್ಯೇಕ ಮೂರು ವಿಭಾಗವಾದರೆ ವಿಚಾರಣಾಧೀಣ ಕೈದಿಗಳ ವಿಭಾಗಕ್ಕೆ ಮುಖ್ಯ ಅಧೀಕ್ಷಕ, ಕೈದಿ ಹಾಗೂ ಮಹಿಳಾ ಕೈದಿ ವಿಭಾಗಗಳಿಗೆ ಎಸ್ಪಿ ದರ್ಜೆ ಅಧೀಕ್ಷರು ಮುಖ್ಯಸ್ಥರಾಗಲಿದ್ದಾರೆ.
ಈ ಮೂರು ವಿಭಾಗಕ್ಕೆ ಡಿಐಜಿ ಉಸ್ತುವಾರಿ ವಹಿಸಲಿದ್ಧಾರೆ ಎಂದು ಮೂಲಗಳು ತಿಳಿಸಿವೆ. ಜೈಲಿನಲ್ಲಿ ಬಹುತೇಕ 5 ಸಾವಿರ ಕೈದಿಗಳಿದ್ದಾರೆ. ಇವರ ಮೇಲೆ ಹದ್ದಿನ ಕಣ್ಣಿಡಬೇಕಾಗಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಂಖ್ಯೆಯಲ್ಲಿ ಗೌಣವಾಗಿದ್ದು, ಇದು ಅಕ್ರಮಕ್ಕೆ ದಾರಿಯಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸರ್ಕಾರವು ಸುಮಾರು 800 ಹುದ್ದೆಗಳು ಮಂಜುರಾಗಿದ್ದ ಪೈಕಿ 400 ಮಂದಿ ಮಾತ್ರ ಸಿಬ್ಬಂದಿಗಳಿದ್ದಾರೆ.
ಸಾವಿರಾರು ಕೈದಿಗಳಿರುವ ಕಾರಾಗೃಹದಲ್ಲಿ ನೂರಾರು ಸಂಖ್ಯೆಯಲ್ಲಿ ಸಿಬ್ಬಂದಿಯಿದ್ದು, ಇದು ಅವರ ಕಾರ್ಯದೊತ್ತಡ ಹೆಚ್ಚಾಗಲು ಕಾರಣವಾಗಿದೆ. ಖಾಲಿಯಿರುವ ಹುದ್ದೆಗಳನ್ನ ತುಂಬುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.