ಶಿಡ್ಲಘಟ್ಟ: ತಾಲ್ಲೂಕಿನ ವೈ ಹುಣಸೇನಹಳ್ಳಿ ಗ್ರಾ ಪಂ ಅಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನೆಲೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುರುಳಿ ಆಯ್ಕೆ ಆಗಿದ್ದಾರೆ. ಪೋಲಿಸ್ ಬಿಗಿ ಬಂದೋಬಸ್ತ್ ನಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಚುನಾವಣೆ ಗೆದ್ದಿದ್ದ ವಾರ ಹುಣಸೇನಹಳ್ಳಿ ಗ್ರಾ ಪಂ ಸದಸ್ಯ ರಾಜಪ್ಪ ಕಾಂಗ್ರೆಸ್ ಬೆಂಬಲಿತರಿಗೆ ತಮ್ಮ ಬೆಂಬಲ ಸೂಚಿಸುವ ಮೂಲಕ ಗೆಲುವಿನ ರುವಾರಿಯಾದರು.
ಒಟ್ಟು 17 ಸದಸ್ಯರ ಪೈಕಿ ಜೆಡಿಎಸ್ ನ 9 ಸದಸ್ಯರಲ್ಲಿ ಒಬ್ಬರು ಕಾಂಗ್ರೆಸ್ ಸೇರುವ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರಿಂದ ಗ್ರಾಮ ಪಂ ಆವರಣದಲ್ಲಿ ಕೆಲ ಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಯಿತು. ರಾಜಪ್ಪ ಮತದಾರರ ನಂಬಿಕೆಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡರು ತಮ್ಮ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ ಪಂ ಸದಸ್ಯ ರಾಜಪ್ಪ ಪಂಚಾಯ್ತಿಯನ್ನು ಅಬಿವೃದ್ದಿ ಮಾಡುವವರಿಗೆ ನನ್ನ ಸ್ವ ಇಚ್ಛೆಯಿಂದ ಬೆಂಬಲ ಕೊಟ್ಟಿದ್ದೇನೆ ಅಷ್ಟೇ ಇದರಲ್ಲಿ ರಾಜಕಾರಣವೂ ಇಲ್ಲ, ಕೆಲ ಜೆಡಿಎಸ್ ಕಾರ್ಯಕರ್ತರು ನನ್ನ ತೇಜೋವದೆ ಮಾಡಲು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.