ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬಾಂಗ್ಲಾದೇಶಿ ಮೂಲದ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಎಂಬಾತನನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೀಗ ಆರೋಪಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಮುಂಬೈ ಕೋರ್ಟ್ ಆದೇಶ ಹೊರಡಿಸಿದೆ. ಸೈಫ್ ಮನೆ ಮೇಲೆ ನಡೆಸಿದ ದಾಳಿಯ ಉದ್ದೇಶ ಏನು? ಕೃತ್ಯದಲ್ಲಿ ಯಾರೆಲ್ಲ ಭಾಗಿ ಆಗಿದ್ದಾರೆ ಎಂಬುದು ತನಿಖೆ ನಡೆಸುತ್ತಿದ್ದಾರೆ.
ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿರುವ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಕೆಲವು ತಿಂಗಳಿಂದ ಮುಂಬೈನಲ್ಲಿ ವಾಸವಾಗಿದ್ದಾನೆ. ತನ್ನ ಹೆಸರನ್ನು ಕೂಡ ವಿಜಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದಾನೆ. ಇದೀಗ ಇವುಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸೈಫ್ ಮನೆಗೆ ನುಗ್ಗಿ ದಾಳಿ ಮಾಡಿದ ದಿನ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಧರಿಸಿದ್ದ ಬಟ್ಟೆಯನ್ನು ಮುಚ್ಚಿಟ್ಟಿದ್ದಾನೆ. ಆ ಬಟ್ಟೆಯಲ್ಲಿ ಸೈಫ್ ಅಲಿ ಖಾನ್ ಅವರ ರಕ್ತದ ಕಲೆಗಳು ಇವೆ. ಆದರೆ ಆ ಬಟ್ಟೆಯನ್ನು ಇಸ್ಲಾಂ ಶೆಹಜಾದ್ ಮುಚ್ಚಿಟ್ಟಿದ್ದಾನೆ. ಅವುಗಳನ್ನು ವಶಕ್ಕೆ ಪಡೆಯುವುದು ಬಾಕಿ ಇದೆ ಎಂದು ಮುಂಬೈ ಪೊಲೀಸರು ಕೋರ್ಟ್ಗೆ ತಿಳಿಸಿದ್ದಾರೆ. ಪಕ್ಕಾ ಪ್ಲ್ಯಾನ್ ಮಾಡಿಯೇ ಆತ ಸೈಫ್ ಮನೆಗೆ ನುಗ್ಗಿದ್ದ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದ್ದಾರೆ.
ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಪರವಾಗಿ ವಕೀಲ ದಿನೇಶ್ ಪ್ರಜಾಪತಿ ವಾದ ಮಾಡಿದ್ದಾರೆ. ‘ಸೆಲೆಬ್ರಿಟಿ ಮೇಲೆ ದಾಳಿ ಆಗಿದೆ ಎಂಬ ಕಾರಣಕ್ಕೆ ಹೆಚ್ಚು ಚರ್ಚೆ ಆಗುತ್ತಿದೆ. ಆರೋಪಿಯನ್ನು ಸುಮ್ಮನೇ ಬಲಿಪಶು ಮಾಡಲು ಪ್ರಯತ್ನಿಸಲಾಗಿದೆ. ಆರೋಪಿಯಿಂದ ಯಾವುದೇ ಸಾಕ್ಷಿಯನ್ನು ಪೊಲೀಸರು ಕಲೆ ಹಾಕಿಲ್ಲ. ಆತ ಬಾಂಗ್ಲಾದೇಶದ ಪ್ರಜೆ ಎಂಬುದನ್ನು ಸಾಬೀತು ಮಾಡಲು ಕೂಡ ಯಾವುದೇ ದಾಖಲೆಗಳನ್ನು ಪೊಲೀಸರು ನೀಡಿಲ್ಲ’ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ.