ತಮಿಳು ಖ್ಯಾತ ನಟ ವಿಶಾಲ್ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದು ವಿಶಾಲ್ ಅವರನ್ನು ನೋಡಿ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ. ವಿಶಾಲ್ ಆರೋಗ್ಯದ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಟ್ರೋಲ್ ಮಾಡಿದ್ದರು. ಇನ್ನೂ ಕೆಲವರು ಅತಿಯಾದ ಮಾದಕ ವ್ಯಸನದಿಂದ ಹೀಗಾಗಿದೆ ಎಂದು ಆಡಿಕೊಂಡಿದ್ದರು. ಇನ್ನು ಕೆಲವರು ವಿಶಾಲ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅವರಿಗೆ ನಡೆದಾಡಲು ಸಹ ಸಾಧ್ಯವಾಗುತ್ತಿಲ್ಲ ಎಂದೆಲ್ಲ ಸುದ್ದಿ ಹಬ್ಬಿಸಿದ್ದರು. ತಮ್ಮನ್ನು ಟ್ರೋಲ್ ಮಾಡಿದವರಿಗೆ ಇದೀಗ ನಟ ವಿಶಾಲ್ ಉತ್ತರ ನೀಡಿದ್ದಾರೆ.
ವಿಶಾಲ್ ನಟನೆಯ 12 ವರ್ಷಗಳ ಹಿಂದೆಯೇ ರೆಡಿಯಾಗಿದ್ದ ಸಿನಿಮಾ ಇದೀಗ ಬಿಡುಗಡೆ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಘಳಿಕೆ ಕಂಡಿದೆ. ಸಿನಿಮಾ ಬಿಡುಗಡೆ ಆದ ಕೆಲವೇ ದಿನಗಳಲ್ಲಿ 30 ಕೋಟಿ ಕಲೆಕ್ಷನ್ ಮಾಡಿದ್ದು 50 ಕೋಟಿಯತ್ತ ದಾಪುಗಾಲು ಹಾಕಿದೆ. ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ವಿಶಾಲ್, ವೇದಿಕೆ ಮೇಲೆ ಮಾತನಾಡಲು ಮೈಕ್ ಕೈಗೆ ಎತ್ತಿಕೊಳ್ಳುತ್ತಲೇ ಅವರ ಕೈ ನಡುಗಲು ಪ್ರಾರಂಭವಾಯ್ತು. ಕೂಡಲೇ ಇನ್ನೊಂದು ಕೈಯಿಂದ ನಡುಗುತ್ತಿರುವ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ವಿಶಾಲ್, ಕಾರ್ಯಕ್ರಮದ ನಿರೂಪಕಿಯನ್ನು ಉದ್ದೇಶಿಸಿ, ‘ಅಯ್ಯೋ ಏನಿದು ನಡುಗುವುದು ನಿಲ್ಲುತ್ತಲೇ ಇಲ್ಲವಲ್ಲ. ಮತ್ತೊಮ್ಮೆ ಯೂಟ್ಯೂಬ್ನಲ್ಲಿ ವೈರಲ್ ವಿಡಿಯೋ ಆಗಿಬಿಡುತ್ತದೆಯಾ’ ಎಂದರು.
ಅಸಲಿಗೆ ವಿಶಾಲ್ ಕೈ ನಡುಗುತ್ತಿರಲಿಲ್ಲ ಬದಲಿಗೆ ಅವರೇ ಬೇಕೆಂದು ತಮಾಷೆಗೆ ಹಾಗೆ ಮಾಡಿದರು. ಅದೇ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಾವು ಆರೋಗ್ಯವಾಗಿಯೇ ಇರುವುದಾಗಿಯೂ ಹೇಳಿದರು. ಹಿಂದಿಗಿಂತಲೂ ಹೆಚ್ಚು ಉತ್ಸಾಹದಲ್ಲಿಯೂ ಇರುವುದಾಗಿ ವಿಶಾಲ್ ಹೇಳಿದರು. ಈ ಹಿಂದೆ ವೈರಲ್ ಆಗಿದ್ದ ವಿಡಿಯೋದ ಅಸಲಿಯತ್ತೆಂದರೆ ವಿಶಾಲ್ಗೆ ಅಂದು ವಿಪರೀತ ಜ್ವರ ಇತ್ತು, ಆದರೆ ಸಿನಿಮಾ ಪ್ರಚಾರ ಕಾರ್ಯಕ್ರಮವಾದ್ದರಿಂದ, ಅನಾರೋಗ್ಯವನ್ನೂ ಲೆಕ್ಕಿಸದೆ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಹಾಗಾಗಿ ಅವರ ಕೈ ನಡುಗುತ್ತಿತ್ತು, ಮುಖ ಕಳೆಗುಂದಿತ್ತು. ವಿಶಾಲ್ ಆರೋಗ್ಯದಲ್ಲಿ ಏನೂ ಸಮಸ್ಯೆ ಇಲ್ಲ. ಅವರು ಆರೋಗ್ಯವಾಗಿಯೇ ಇದ್ದಾರೆ ಎಂಬುದನ್ನು ವಿಶಾಲ್ ಹೇಳಿದ್ದಾರೆ.
ವಿಶಾಲ್ ನಟನೆಯ ‘ಮದ ಜಗ ರಾಜ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಈ ಸಿನಿಮಾ 12 ವರ್ಷಗಳ ಹಿಂದೆ ಬಿಡುಗಡೆ ಆಗಬೇಕಿತ್ತು. ಆದರೆ ಹಣಕಾಸಿನ ಸಮಸ್ಯೆ, ನ್ಯಾಯಾಲಯದಲ್ಲಿ ಹೂಡಲಾಗಿದ್ದ ದಾವೆಯ ಕಾರಣದಿಂದಾಗಿ ಸಿನಿಮಾ ಇಷ್ಟು ವರ್ಷ ಬಿಡುಗಡೆ ಆಗಿರಲಿಲ್ಲ. ಆದರೆ ಇದೀಗ ಎಲ್ಲವು ಇತ್ಯರ್ಥವಾಗಿದ್ದು ಕಳೆದ ಶುಕ್ರವಾರ ಸಿನಿಮಾ ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದ್ದು ಸದ್ಯದಲ್ಲೇ 50 ಕೋಟಿ ಕಲೆಕ್ಷನ್ ಮಾಡಲಿದೆ.