ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಅಭಿಮಾನಿಗಳಿಗೆ ಪತ್ರ ಬರೆದು ಮನವಿಯೊಂದನ್ನು ಮಾಡಿದ್ದಾರೆ. ಕನ್ನಡ ಚಿತ್ರರಂಗದ ಸ್ಟಾರ್ ನಟನಾಗಿ ಮಿಂಚುತ್ತಿರುವ ದುನಿಯಾ ವಿಜಯ್ ನಿರ್ದೇಶಕರಾಗಿಯೂ ಸೈ ಎನಿಸಿಕೊಂಡಿದ್ದಾರೆ. ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗ ಹೊಂದಿರುವ ದುನಿಯಾ ವಿಜಯ್ ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಕೊಂಡಿದ್ದು, ಕಳೆದ ಕೆಲ ವರ್ಷದಿಂದ ತಮ್ಮ ಹುಟ್ಟುಹಬ್ಬವನ್ನು ಹುಟ್ಟೂರಿನಲ್ಲಿ ತಂದೆ-ತಾಯಿಯ ಸಮಾಧಿ ಬಳಿ ಆಚರಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಂತೆ. ಇದನ್ನು ಸ್ವತಃ ದುನಿಯಾ ವಿಜಯ್ ಅವರೇ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ದುನಿಯಾ ವಿಜಯ್ ಬರೆದಿದ್ದಾರೆ. ‘ನನ್ನ ಪ್ರೀತಿಯ ಅಭಿಮಾನಿಗಳೇ, ಪ್ರತಿ ವರ್ಷವೂ ನನ್ನ ಹುಟ್ಟು ಹಬ್ಬವನ್ನು ನಿಮ್ಮ ಮನೆಯ, ಊರಿನ ಹಬ್ಬವನ್ನಾಗಿ ನೀವುಗಳು ಅಂದರೆ ನನ್ನ ಅಭಿಮಾನಿಗಳು ಆಚರಣೆ ಮಾಡ್ತಾ ಇದ್ರಿ. ಈ ಬಾರಿಯೂ ನಿಮ್ಮ ಜತೆ ನಾನು ಹುಟ್ಟು ಹಬ್ಬವನ್ನು ಆಚರಿಸಬೇಕು ಎಂಬ ಆಸೆ ಇತ್ತು ಆದರೆ ಕೆಲಸ ಎಂಬ ಜವಬ್ದಾರಿ ನನ್ನ ಬೆನ್ನೆರಿದೆ. ತಾವೆಲ್ಲರೂ ನಾನು ಮಾಡುವ ಕೆಲಸಕ್ಕೆ ನನ್ನ ಜತೆ ನಿಂತು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದೀರ. ಪ್ರತಿ ಬಾರಿಯಂತೆ ಈ ಬಾರಿ ನಾನು ಹುಟ್ಟುಹಬ್ಬದ ದಿನ ನನ್ನ ತಾಯಿ, ತಂದೆ ಸಮಾಧಿ ಬಳಿ ಸಿಗುವುದಿಲ್ಲ.ಅಂದು ಜಡೇಶ್ ಕೆ ಹಂಪಿ ನಿರ್ದೇಶನ ಮಾಡುತ್ತಿರುವ VK29 ಚಿತ್ರೀಕರಣದಲ್ಲಿರುತ್ತೇನೆ. ನಿಮ್ಮ ಪ್ರೀತಿ ಅಭಿಮಾನದ ನಿರೀಕ್ಷೆಯಂತೆ ಅಂದೇ VK 29 ಚಿತ್ರದ ಫಸ್ಟ್ ಲುಕ್ ನಿಮಗಾಗಿ ಬಿಡುಗಡೆ ಮಾಡ್ತಿದ್ದೇವೆ. ವಿಶೇಷ ಮನವಿ: ಶನಿವಾರ ಭಾನುವಾರ ನಾನೂ ಊರಲ್ಲಿ ಇರುವುದಿಲ್ಲ.. ದಯವಿಟ್ಟು ಯಾರೂ ಕೂಡ ಮನೆ ಬಳಿ ಬಂದು ಕಾಯಬೇಡಿ’ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ದುನಿಯಾ ವಿಜಿ, ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ವಿಕೆ29’ ಸೇರಿದಂತೆ ವಿನಯ್ ರಾಜ್ಕುಮಾರ್ ನಟನೆಯ ‘ಸಿಟಿಲೈಟ್ಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಟನೆಯ ಹೊಸ ಸಿನಿಮಾದಲ್ಲಿಯೂ ದುನಿಯಾ ವಿಜಿ ನಟಿಸಲಿದ್ದಾರೆ ಎಂದು ಈ ಹಿಂದೆ ಘೋಷಣೆ ಆಗಿತ್ತು. ಆದರೆ ಆ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಇದೆಲ್ಲದರ ಜೊತೆಗೆ ತಮ್ಮದೇ ನಿರ್ದೇಶನದ ಇನ್ನೊಂದು ಸಿನಿಮಾ ಆರಂಭಿಸುವ ಯೋಚನೆಯಲ್ಲಿ ದುನಿಯಾ ವಿಜಯ್ ಇದ್ದಾರೆ.