ಭೀಕರ ರಸ್ತೆ ಅಪಘಾತದಲ್ಲಿ ಹಿಂದಿ ಕಿರುತೆರೆ ನಟ ಅಮನ್ ಜೈಸ್ವಾಲ್ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 23 ವರ್ಷ ವಯಸ್ಸಾಗಿತ್ತು. ‘ಧರ್ತಿಪುತ್ರ ನಂದಿನಿ’ ಧಾರಾವಾಹಿ ಮೂಲಕ ಅವರು ಗಮನ ಸೆಳೆದಿದ್ದ ಅಮನ್ ಜೈಸ್ವಾಲಿ ಅಡಿಷನ್ ಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಶುಕ್ರವಾರ(ಜ.18) ಮಧ್ಯಾಹ್ನ 3.15ಕ್ಕೆ ತಮ್ಮ ಬೈಕ್ನಲ್ಲಿ ಮುಂಬೈನ ಹಿಲ್ ಪಾರ್ಕ್ ರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಟ್ರಕ್ ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅಮನ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಆಗಲೇ ಅವರು ನಿಧನ ಹೊಂದಿದ್ದರು. ಸದ್ಯ ಟ್ರಕ್ ಚಾಲಕನನ್ನು ಬಂಧಿಸಲಾಗಿದ್ದು ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮನ್ ಜೈಸ್ವಾಲ್ ಅವರು ಆಡಿಷನ್ ಒಂದಕ್ಕೆ ತೆರಳುತ್ತಿದ್ದರು. ಅಮನ್ ಜೈಸ್ವಾಲ್ ಅವರು ಕೊನೆಯ ಬಾರಿಗೆ ಇನ್ಸ್ಟಾಗ್ರಾಮ್ನಲ್ಲಿ ‘ಧರ್ತಿಪುತ್ರ ನಂದಿನಿ’ ಧಾರಾವಾಹಿ ಬಗ್ಗೆ ಪೋಸ್ಟ್ ಮಾಡಿದ್ದರು.
ಕುಟುಂಬದ ವಿರೋಧದ ನಡುವೆಯೂ ಅಮನ್ ಅವರು ಬಣ್ಣದ ಲೋಕಕ್ಕೆ ಬಂದರು. ಇಲ್ಲಿ ಸಾಕಷ್ಟು ಹೆಸರು ಮಾಡಿದರು. ಅಮನ್ ಅವರು ಮೂಲತಃ ಉತ್ತರ ಪ್ರದೇಶದ ಬಲಿಯಾದವರು. ಧಾರಾವಾಹಿಗೆ ಬರುವುದಕ್ಕೂ ಮೊದಲು ಅವರು ಮಾಡೆಲ್ ಆಗಿ ಗಮನ ಸೆಳೆದಿದ್ದರು. 2024ರಲ್ಲಿ ‘ಧರ್ತಿಪುತ್ರ ನಂದಿನಿ’ ಕೊನೆಗೊಂಡಿದೆ.
2021ರಿಂದ 2023ರವರೆಗೆ ಅಮನ್ ಅವರು ‘ಪುಣ್ಯಶ್ಲೋಕ ಅಭಿಲ್ಯಬಾಯಿ’ ಧಾರಾವಾಹಿಯಲ್ಲೂ ನಟಿಸಿದ್ದರು. ಅಮನ್ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.