ಗುರುವಾರ ಮುಂಜಾನೆ 2.30ರ ಸುಮಾರಿಗೆ ದುಷ್ಕರ್ಮಿಯೋರ್ವ ನಟ ಸೈಫ್ ಅಲಿ ಖಾನ್ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಗೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದೀಗ ಘಟನೆ ಬಗ್ಗೆ ಬಾಲಿವುಡ್ ನಟ ಹಾಗೂ ಕರೀನಾ ಕಪೂರ್ ಮಾಜಿ ಪ್ರೇಮಿ ಶಾಹಿದ್ ಕಪೂರ್ ಪ್ರತಿಕ್ರಿಯಿಸಿದ್ದಾರೆ.
ಶಾಹಿದ್ ಕಪೂರ್ ‘ದೇವ’ ಸಿನಿಮಾದಲ್ಲಿ ನಟಿಸಿದ್ದು ಜನವರಿ 31ರಂದು ರಿಲೀಸ್ ಆಗಲಿದೆ. ಚಿತ್ರದ ಟ್ರೈಲರ್ ಅನ್ನು ಮುಂಬೈನಲ್ಲಿ ಬಿಡುಗಡೆ ಮಾಡಲಾಗಿದೆ. ಈ ವೇಳೆ ಸೈಫ್ ಅಲಿ ಖಾನ್ ಬಗ್ಗೆ ಶಾಹಿದ್ ಕಪೂರ್ ಅವರಿಗೆ ಪ್ರಶ್ನೆ ಎದುರಾಗಿದ್ದು, ಘಟನೆಯ ಬಗ್ಗೆ ಶಾಹಿದ್ ಕಪೂರ್ ಕಳವಳ ವ್ಯಕ್ತಪಡಿದ್ದಾರೆ.
‘ಸೈಫ್ ಅಲಿ ಖಾನ್ ಅವರಿಗೆ ಮನೆಯಲ್ಲೇ ಈ ರೀತಿ ಆಯಿತು ಎಂದು ತಿಳಿದಾಗ ನಮಗೆಲ್ಲ ಶಾಕ್ ಆಯಿತು. ಮುಂಬೈ ರೀತಿಯ ನಗರದಲ್ಲಿ ಇದನ್ನು ಒಪ್ಪಿಕೊಳ್ಳುವುದು ನಿಜಕ್ಕೂ ಕಷ್ಟ. ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ನಾನು ನಂಬಿದ್ದೇನೆ. ಇದು ಸುರಕ್ಷಿತ ಜಾಗ. ಸಾಮಾನ್ಯವಾಗಿ ಇಂಥದ್ದೆಲ್ಲ ಆಗುವುದಿಲ್ಲ. ಕುಟುಂಬದ ಯಾರಾದರೂ ರಾತ್ರಿ 2 ಅಥವಾ 3 ಗಂಟೆಗೆ ಕೂಡ ಸುರಕ್ಷಿತವಾಗಿ ಹೊರಗೆ ಹೋಗಬಹುದು ಅಂತ ನಾವು ಹೆಮ್ಮೆಯಿಂದ ಹೇಳುತ್ತೇವೆ. ಆದರೆ ಈ ಘಟನೆ ನಿಜಕ್ಕೂ ಶಾಕಿಂಗ್. ಸೈಫ್ ಬೇಗ ಗುಣಮುಖರಾಗಲಿ ಎಂದು ನಾವು ಬಯಸುತ್ತಿದ್ದೇವೆ’ ಎಂದು ಶಾಹಿದ್ ಕಪೂರ್ ಹೇಳಿದ್ದಾರೆ.