ಸೌಮ್ಯಾ ರಾವ್ ನಟನೆಯ ಜೊತೆಗೆ ಆ್ಯಂಕರ್ ಆಗಿ ಗುರುತಿಸಿಕೊಂಡಿದ್ದಾರೆ. ಕನ್ನಡದವರಾದ ಸೌಮ್ಯಾ ರಾವ್ ತೆಲುಗು ಚಿತ್ರರಂಗದಲ್ಲಿ ಆ್ಯಂಕರಿಂಗ್ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರ ಬಗ್ಗೆ ಸೋಶಿಯಲ್ ಮೀಡಿಯಾ ಹಲವು ಕೆಟ್ಟ ಕಮೆಂಟ್ಗಳು ಹರಿದಾಡುತ್ತಿರುತ್ತವೆ. ಈ ಬಗ್ಗೆ ಸೌಮ್ಯಾ ರಾವ್ ಬೇಸರ ವ್ಯಕ್ತಪಡಿಸಿದ್ದಾರೆ.
ತೆಲುಗಿನಲ್ಲಿ ಟಾಪ್ ಶೋಗಳನ್ನು ನಿರೂಪಣೆ ಮಾಡುತ್ತಿರುವ ಸೌಮ್ಯಾ ರಾವ್ ಅವರಿಗೆ ಕನ್ನಡದಲ್ಲಿ ಅವರಿಗೆ ಅವಕಾಶ ಸಿಕ್ಕೇ ಇಲ್ಲ. ಈ ಬಗ್ಗೆ ಖಾಸಗಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸತ್ಯ ಕಹಿ ಎಂದಿರುವ ಸೌಮ್ಯಾ ರಾವ್, ಕನ್ನಡದಲ್ಲಿ ಕೇಳಿದರೂ ಅವರಿಗೆ ಅವಕಾಶ ನೀಡಿಲ್ಲ ಎಂದಿದ್ದಾರೆ
ಈ ಮೊದಲು ತೆಲುಗು ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸೌಮ್ಯಾ ಅವರು ಕನ್ನಡ ಇಂಡಸ್ಟ್ರಿ ಬಗ್ಗೆ ಬೇಸರ ಹೊರಹಾಕಿದ್ದರು. ‘ಕನ್ನಡ ಇಂಡಸ್ಟ್ರಿ ಮೇಲೆ ನನಗೆ ಒಲವು ಇಲ್ಲ, ಏಕೆಂದರೆ ಅವರು ನನ್ನನ್ನು ಬೆಳೆಸಿಲ್ಲ ಎಂದು ನಾನು ಹೇಳಿದ್ದೆ. ಅದನ್ನು ನಾನು ಬೇಸರದಿಂದ ಹೇಳಿದ್ದು. ಪ್ರಸ್ತುತ ಕನ್ನಡ ಇಂಡಸ್ಟ್ರಿ ಒಳ್ಳೆಯ ಹೀರೋಯಿನ್ಗಳನ್ನು ಕಳೆದುಕೊಳ್ಳುತ್ತಿದೆ. ಕೆಟ್ಟ ಹುಳದಿಂದ ಇಂಡಸ್ಟ್ರಿ ಹಾಳಾಗುತ್ತಿದೆ ಎಂದು ನಾನು ಸಂದರ್ಶನದಲ್ಲಿ ಹೇಳಿದ್ದೆ’ ಎಂಬುದಾಗಿ ಸೌಮ್ಯಾ ಹೇಳಿದ್ದಾರೆ. ಈ ಬಗ್ಗೆ ಅವರು ಸಾಕಷ್ಟು ಟೀಕೆ ಎದುರಿಸಿದ್ದರು.
‘ಅಣ್ಣಾವ್ರ ಸಿನಿಮಾಗಳನ್ನು ನೋಡಿದ್ದೀರಾ ಎಂದೆಲ್ಲ ಜನರು ಕೇಳುತ್ತಾರೆ. ನಾನು ರಾಜ್ಕುಮಾರ್ ಸಿನಿಮಾ ನೋಡಿ ಬೆಳೆದವಳು. ಬೇಡರ ಕಣ್ಣಪ್ಪ ಇಂದ ಹಿಡಿದು ಶಬ್ದವೇದಿ ಸಿನಿಮಾವರೆಗೆ ಎಲ್ಲವನ್ನೂ ನೋಡಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಸೌಮ್ಯಾ.
‘ತೆಲುಗಿನಲ್ಲೇ ಬಿದ್ದು ಸಾಯಿ, ಇಲ್ಲಿಗೆ ಬರಬೇಡ ಎಂದು ಅನೇಕರು ಕಮೆಂಟ್ ಹಾಕಿದ್ದರು. ನಾನು ಇಲ್ಲಿ ಮೈಮಾಟ ತೋರಿಸೋಕೆ ಬಂದಿಲ್ಲ. ಬಡತನದ ಬೇಗೆಯಿಂದ ಹೊರ ಬರೋಕೆ ಬಂದಿದ್ದು. 100ರಲ್ಲಿ 90 ಜನರು ಒಳ್ಳೆಯ ಮಾತನ್ನು ಆಡಿದ್ದಾರೆ. ಉಳಿದ ಶೇ.10 ಜನರ ಮಾತನ್ನು ಕೇಳೋಕೆ ಆಗಲ್ಲ’ ಎಂದಿದ್ದಾರೆ ಅವರು.
‘ನನ್ನ ಬಗ್ಗೆ ಕೆಟ್ಟ ಶಬ್ದ ಬಳಕೆ ಮಾಡುತ್ತಾರೆ. ಕರ್ನಾಟಕ್ಕೆ ಬಂದ್ರೆ ಮೆಟ್ಟಲ್ಲಿ ಹೊಡಿತೀನಿ ಎನ್ನುತ್ತಾರೆ. ನನ್ನ ರಾಜ್ಯಕ್ಕೆ ಬರೋಕೆ ಅವರ ಒಪ್ಪಿಗೆ ಬೇಕಾ? ಈಗ ಬಟ್ಟೆ ಬಿಚ್ಚಿಕೊಂಡು ನಿಂತರವರಿಗೆ ಹೆಚ್ಚು ಫಾಲೋವರ್ಸ್. ಬಟ್ಟೆ ಬಿಚ್ಚುಕೊಂಡು ನಿಂತವರು ಇವರಿಗೆ ದೇವರ ರೀತಿ ಕಾಣಿಸುತ್ತಾರೆ. ತೆಲುಗುನಲ್ಲಿ ಯಾರದ್ದೋ ಜೊತೆ ಮಲಗಿದ್ದಾಳೆ, ಅದಕ್ಕೆ ಅಲ್ಲಿ ಅವಕಾಶ ಸಿಕ್ಕಿತು ಎಂದು ಯಾರೋ ಕಮೆಂಟ್ ಮಾಡಿದ್ದರು. ತೆಲುಗಿನಲ್ಲಿ ಮಲಗಿದವಳಿಗೆ ಕನ್ನಡದವರ ಜೊತೆ ಮಲಗೋಕೆ ಬರಲ್ವ? ಅಲ್ಲಿರೋನು ಗಂಡಸೇ, ಇಲ್ಲಿರೋನು ಗಂಡಸೇ. ನನಗೆ ಆ ರೀತಿಯ ಕಲಾವಿದೆ ಅಲ್ಲ. ಕಲಾವಿದರ ಜೀವನ ತುಂಬಾನೇ ಕಷ್ಟ’ ಎಂದು ಬೇಸರ ಹೊರಹಾಕಿದ್ದಾರೆ.