ಬೆಂಗಳೂರು: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹದೇವಪುರ ವಲಯದಲ್ಲಿ ಕೆ.ಆರ್ ಪುರಂ ಕಛೇರಿಯಲ್ಲಿ ಇಂದು ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ನಡೆದ ವೇಳೆ ಸಾರ್ವಜನಿಕರೊಬ್ಬರು ಮಾತನಾಡಿ, ಕೆ.ಆರ್ ಪುರಂ ವ್ಯಾಪ್ತಿಯಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆ ಹೆಚ್ಚಿದ್ದು, ಅದನ್ನು ನಿಯಂತ್ರಿಸಲು ಮನವಿ ಮಾಡಿದರು.
ಅದಕ್ಕೆ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ಒಮ್ಮೆ ಬಳಸುವ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೆಧಿಸಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಮಾರ್ಷಲ್ಗಳು ಸೇರಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಅನ್ನು ಹೆಚ್ಚು ಬಳಕೆ ಮಾಡುವ ಪ್ರದೇಶಗಳಿಗೆ ಅನಿರೀಕ್ಷಿತ ದಾಳಿ ನಡೆಸಿ ವಶಪಡಿಸಿಕೊಳ್ಳುವುದರ ಜೊತೆಗೆ ದಂಡ ವಿಧಿಸಬೇಕು. ಜೊತೆಗೆ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಸದಂತೆ ಮಾರಾಟಗಾರರಿಗೆ ಎಚ್ಚರಿಕೆ ನೀಡಬೇಕೆಂದು ಸೂಚನೆ ನೀಡಿದರು.
ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಿ:
ಕೆ.ಆರ್ ಪುರಂ ವ್ಯಾಪ್ತಿಯಲ್ಲಿ ರಾಜಕಾಲುವೆ ಭಾಗದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತಡೆಯಲು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಸಂಬಂಧಪಟ್ಟ ರಾಜಕಾಲುವೆ ವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ರಾಜಕಾಲುವೆ ಒತ್ತುವರಿ ಮಾಡಿದ್ದರೆ ಅಥವಾ ಬಫರ್ ವಲಯದಲ್ಲಿ ನಿರ್ಮಾಣ ಮಾಡಿದ್ದರೆ ಕೂಡಲೆ ಕಾಮಗಾರಿಯನ್ನು ನಿಲ್ಲಿಸಲು ನೋಟೀಸ್ ಜಾರಿ ಮಾಡಬೇಕು. ಜೊತೆಗೆ ಬೆಸ್ಕಾಂ ನಿಂದ ವಿದ್ಯತ್ ಸಂಪರ್ಕ ಕಡಿತಗೊಳಿಸಿ ಭೂಮಾಪಕರಿಂದ ಸಮೀಕ್ಷೆ ನಡೆಸಿ ಒತ್ತುವರಿ ಮಾಡಿದ್ದರೆ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖಾಲಿ ಜಾಗದಲ್ಲಿ ಕಸ ಹಾಕುವುದನ್ನು ತಡೆಯಿರಿ:
ರಾಮಮೂರ್ತಿ ನಗರ ವ್ಯಾಪ್ತಿಯಲ್ಲಿ ಖಾಲಿ ಜಾಗಗಳಲ್ಲಿ ಕಸ ಬಿಸಾಡುತ್ತಿದ್ದು, ಅದನ್ನು ತಡೆಯಲು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಅಧಿಕಾರಿಗಳು ಸ್ಥಳ ಪರಿಶೀಲಿಸಿ ಮನೆ-ಮನೆ ಕಸ ಸರಿಯಾಗಿ ಸಂಗ್ರಹವಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಜೊತೆಗೆ ಖಾಲಿ ಜಾಗದಲ್ಲಿ ಕಸ ಹಾಕುವುದನ್ನು ತಡೆಯುವ ಸಲುವಾಗಿ ಮಾರ್ಷಲ್ಗಳನ್ನು ಗಸ್ತು ತಿರುಗಲು ಸೂಚನೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೀದಿ ದೀಪಗಳ ವರದಿ ಕೊಡಿ:
ಕೆ.ಆರ್ ಪುರಂ ಮೇಡರಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೀದಿ ಬದಿ ದೀಪಗಳನ್ನು ಪರಿಶೀಲಿಸಿ ಜಿಪಿಎಸ್ ಸಹಿತ ಛಾಯಾಚಿತ್ರ ತೆಗೆಯುವ ಮೂಲಕ, ಎಷ್ಟು ದೀಪಗಳು ಸರಿಯಿವೆ, ಎಷ್ಟು ದೀಪಗಳು ದುರಸ್ತಿಯಾಗಿವೆ ಎಂಬುದನ್ನು ವರದಿ ಕೊಡಬೇಕು. ದುರಸ್ತಿಯಲ್ಲಿರುವ ಬೀದಿ ದೀಪಗಳನ್ನು ಕೂಡಲೆ ಅಳವಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
40 ಅರ್ಜಿಗಳ ಸ್ವೀಕಾರ:
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಇಂದು 3ನೇ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಎರಡು ಬಾರಿ ನಡೆದಿರುವ ಕಾರ್ಯಕ್ರಮದಲ್ಲಿ ಬಂದಂತಹ ಅರ್ಜಿಗಳ ಪೈಕಿ ಬಹುತೇಕ ಸಮಸ್ಯೆಗಳನ್ನು ನಿವಾರಣೆ ಮಾಡಲಾಗಿದೆ. ಇಂದು 40 ಅರ್ಜಿಗಳು ಬಂದಿದ್ದು, ಎಲ್ಲವನ್ನು ಕೂಡಲೆ ಬಗಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರಿಂದ ಸ್ವೀಕರಿಸಿದ ಪ್ರಮುಖ ಅಹವಾಲುಗಳು:
1. ಬೆನಗಾನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ವಿದ್ಯುತ್ ದೀಪಗಳನ್ನು ಅಳವಡಿಸಲು ಮನವಿ.
2. ಅನಧಿಕೃತ ಕಟ್ಟಡಗಳ ನಿರ್ಮಾಣದ ಮೇಲೆ ಕ್ರಮ ಕೈಗೊಳ್ಳಲು ಮನವಿ.
3. ಕೆ.ಆರ್ ಪುರ ಹಾಗೂ ವೆಂಗಯ್ಯನ ಕೆರೆ ಒತ್ತುವರಿಯನ್ನು ತಡೆಯಲು ಮನವಿ.
4. ಕೆ.ಆರ್ ಪುರಂ ವ್ಯಾಪ್ತಿಯಲ್ಲಿ ರಸ್ತೆ ಕತ್ತರಿಸಿದ್ದು, ಅದನ್ನು ಪುನರ್ ದುರಸ್ತಿ ಮಾಡಿಸಲು ಮನವಿ.
5. ಇ-ಖಾತಾ ಪಡೆಯಲು ಸಮಸ್ಯೆಯಾಗುತ್ತಿದ್ದು, ಅದನ್ನು ತ್ವರಿತವಾಗಿ ಪಡೆಯಲು ಅನುಕೂಲವಾಗುವಂತೆ ಮಾಡಲು ಮನವಿ.
6. ಹೊಯ್ಸಳ ನಗರ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಲು ಮನವಿ.
7. ವರಮಾವು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಅದನ್ನು ಬಗೆಹರಿಸಲು ಮನವಿ.
8. ಕೆ.ಆರ್ ಪುರಂ ಸಂತೆ ಬಳಿಯಿರುವ ಪಾದಚಾರಿ ಮೇಲ್ಸೇತುವೆಗೆ ಲಿಪ್ಟ್ ಅಳವಡಿಸಲು ಹಾಗೂ ವಿದ್ಯತ್ ದೀಪಗಳನ್ನು ದುರಸ್ಥಿಪಡಿಸಲು ಮನವಿ.
ಈ ವೇಳೆ ವಲಯ ಆಯುಕ್ತರಾದ ರಮೇಶ್, ವಲಯ ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ, ಮುಖ್ಯ ಅಭಿಯಂತರರಾದ ಲೋಕೇಶ್, ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.