ಮೈಸೂರು:- ಮೈಸೂರಿನ ಮೇಗಳಾಪುರದಲ್ಲಿ ಪ್ರೇಯಸಿ ದೂರವಾಗಿದ್ದಕ್ಕೆ ಲವರ್ ಬಾಯ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ವಿನಯ್ ಮೃತ ದುರ್ದೈವಿ. ವಿನಯ್ ಬಾಲ್ಯದಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಆಕೆಯೂ ವಿನಯ್ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಲವ್ ಲೋಕದಲ್ಲಿ ಮುಳುಗಿ ಹೋಗಿದ್ರು. ಇಬ್ಬರ ಸುತ್ತಾಟ ಓಡಾಟ ಜೋರಾಗಿತ್ತು. ಆದ್ರೆ, ಹುಡುಗಿ ಕುಟುಂಬದವರು ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೂ ಸಹ ಇಬ್ಬರ ಪ್ರೀತಿ, ಪ್ರಣಯ ಮುಂದುವರಿದಿತ್ತು. ಅದು ಕುಟುಂಬಸ್ಥರಿಗೂ ಗೊತ್ತಾಗಿ ಅಂತಿಮವಾಗಿ ವಿನಯ್ನಿಂದ ದೂರವಾಗಿದ್ದಾಳೆ. ಇದರಿಂದ ಮನನೊಂದು ವಿನಯ್ ಪ್ರಾಣ ಕಳೆದುಕೊಂಡಿದ್ದಾನೆ
ಯುವತಿ ಬೇರೆಯವನನ್ನು ಮದುವೆಯಾದರೂ ವಿನಯ್, ಆಕೆಯನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಯುವತಿ ಸಹ ತಾನು ಬೇರೆಯವನನ್ನು ಮದುವೆಯಾದರೂ ವಿನಯ್ ಜೊತೆ ಸಂಪರ್ಕ ಹೊಂದಿದ್ದಳು. ಇಬ್ಬರು ಹಾಯಾಗಿ ಸುತ್ತಾಡಿಕೊಂಡಿದ್ದರು.
ಮದುವೆ ನಂತರವೂ ಆಕೆ ವಿನಯ್ ಜೊತೆ ಸುತ್ತಾಟ ಮುಂದುವರಿಸಿದ್ದಳು. ಸಾಲದಕ್ಕೆ ಎರಡ್ಮೂರು ಬಾರಿ ಆಕೆ ಮನೆ ಬಿಟ್ಟು ವಿನಯ್ ಜೊತೆ ಹೋಗಿದ್ದಳು. ಮನೆಯವರು ಹುಡುಕಿ ಕರೆದುಕೊಂಡು ಬಂದಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಜನವರಿ 16 ಈ ವಿಚಾರವಾಗಿ ರಾಜಿ ಪಂಚಾಯತಿಯಾಗಿದ್ದು, ಇದು ವಿನಯ್ಗೆ ಅವಮಾನವಾಗಿತ್ತು. ಕೊನೆಗೆ ಆಕೆ ಸಹ ನಾನು ನನ್ನ ಪತಿ ಜೊತೆ ಹೋಗುವುದಾಗಿ ಹೇಳಿದ್ದಳು. ಇದು ಸಹಜವಾಗಿ ವಿನಯ್ ಅಸಮಾಧಾನಕ್ಕೆ ಕಾರಣವಾಗಿತ್ತು.
ನಂತರವೂ ಆಕೆಯನ್ನು ಸಂಪರ್ಕಿಸಲು ವಿನಯ್ ಸಾಕಷ್ಟು ಪ್ರಯತ್ನಿಸಿದ್ದಾನೆ. ಆದ್ರೆ ಪ್ರಯೋಜನವಾಗಿಲ್ಲ. ಇದರಿಂದ ಮನನೊಂದ ವಿನಯ್, ಮೇಗಳಾಪುರದ ತನ್ನ ಸಹೋದರಿಯ ಮನೆಗೆ ಹೋಗಿ ನೇಣಿಗೆ ಶರಣಾಗಿದ್ದಾನೆ. ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡಿದ್ದಾನೆ. ಇನ್ನು ಈ ಸಾವಿಗೆ ಯುವತಿಯ ಮನೆಯವರೇ ಕಾರಣ ಎಂದು ವಿನಯ್ ಮನೆಯವರ ಆರೋಪ ಮಾಡಿದ್ದಾರೆ.