ವಿಜಯನಗರ: ಸಿರಗುಪ್ಪ ತಾಲೂಕಿನ ಕೆಂಚನಗುಡ್ಡದ ಮೊರಾರ್ಜಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದು, ಮಗನಿಗಾಗಿ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತುಂಬಿಗೆರೆ ದೊಡ್ಡ ತಾಂಡದ ವಿದ್ಯಾರ್ಥಿ ಎಲ್.ವಿ.ಮಣಿಕಂಠ ನಾಪತ್ತೆಯಾಗಿದ್ದಾನೆ. ಮಣಿಕಂಠ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದು, ಮನೆಯಿಂದ ಮರಳಿ ಹಾಸ್ಟೆಲ್ಗೆ ಹೋದವನು ನಾಪತ್ತೆಯಾಗಿದ್ದಾನೆ.
ತಂದೆ ವೆಂಕಟೇಶ್ ನಾಯ್ಕ ಹಾಗೂ ತಾಯಿ ಕುಸುಮ ಬಾಯಿ ಸೇರಿದಂತೆ ಊರಿನ ಮುಖಂಡರು ಹಿರೇಹಡಗಲಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಣಿಕಂಠ ನಾಪತ್ತೆಯಾಗಿ 27 ದಿನಗಳಾಗಿದ್ದು, ತಮ್ಮ ಮಗನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಹೆತ್ತವರು ಮಗನ ಹುಡುಕಿ ಕೊಡಿ ಅಂತ ಅಳಲು ತೋಡಿಕೊಂಡಿದ್ದಾರೆ. 2024 ರ ಡಿಸೆಂಬರ್ 27 ರಂದು ವಿಜಯನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸಾವಜಿ ಹೋಟೆಲ್ ನಲ್ಲಿ ಊಟ ಮಾಡಿ ಹೋಗುತ್ತಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಹಿರೇಹಡಗಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.