ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಚಾಕು ಇರಿತದ ಸುದ್ದಿ ಕೇಳಿ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ. 12 ಅಡಿ ಎತ್ತರದ ಸೈಫ್ ಮನೆ ಕಾಂಪೌಡ್ ಹಾರಿದ ದುಷ್ಕರ್ಮಿಗಳು ಸೈಫ್ ಅಲಿ ಖಾನ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಅಂದ ಹಾಗೆ ಸೈಫ್ ಮನೆಯಲ್ಲಿ ಸಾಕಷ್ಟು ಐಷಾರಾಮಿ ಕಾರುಗಳಿದ್ದರು ಘಟನೆಯ ವೇಳೆ ಸೈಫ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು ಆಟೋದಲ್ಲಿ ಅನ್ನೋದು ವಿಶೇಷ.
ಬೆಳಿಗ್ಗೆ 2.30 ಸುಮಾರಿಗೆ ಮನೆಯಲ್ಲಿ ಗಲಾಟೆ ಕೇಳಿ ಸೈಫ್ ಅವರಿಗೆ ಎಚ್ಚರವಾಗಿದೆ. ಎದ್ದು ನೋಡಿದಾಗ ಸೈಫ್ ಅಲಿ ಖಾನ್ಗೆ ಕಳ್ಳ ಕಾಣಿಸಿದ್ದಾನೆ. ಈ ವೇಳೆ ಆತನನ್ನು ತಡೆಯಲು ಮುಂದಾದಾಗ ಸೈಫ್ ಮೇಲೆ ಹಲ್ಲೆ ನಡೆದಿದೆ. ಈ ವೇಳೆ ಕತ್ತು, ಬೆನ್ನು ಸೇರಿ ಆರು ಕಡೆಗಳಲ್ಲಿ ಗಾಯಗಳಾಗಿವೆ. ಅದರಲ್ಲೂ ಬೆನ್ನಿನ ಭಾಗಕ್ಕೆ ಸೈಫ್ಗೆ ತೀವ್ರವಾಗಿ ಗಾಯವಾಗಿತ್ತು. ಚಾಕುವಿನ ಚೂರು ಸೈಫ್ ಅಲಿ ಖಾನ್ ಬೆನ್ನಿನಲ್ಲಿಯೇ ಉಳಿದುಕೊಂಡಿದ್ದು ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ.
ಗಲಾಟೆ ಸದ್ದು ಕೇಳಿ ಓಡಿ ಬಂದ ಸೈಫ್ ಮಗ ಇಬ್ರಾಹಿಂ ತಂದೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ನೋಡಿ ಶಾಕ್ ಆಗಿದ್ದಾರೆ. ತಕ್ಷಣ ಅವರು ಕಾರಿನಲ್ಲಿ ತಂದೆಯನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರು. ಆದರೆ, ಯಾವ ಕಾರುಗಳೂ ಸಿದ್ಧವಿರಲಿಲ್ಲ. ಈ ಕಾರಣಕ್ಕೆ ಮನೆಯ ಹೊರಕ್ಕೆ ತೆರಳಿ ಆಟೋನ ಕರೆದುಕೊಂಡು ಬಂದಿದ್ದು, ಆಟೋದಲ್ಲಿ ಸೈಫ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಸೈಫ್ ಅಲಿ ಖಾನ್ ಅವರು ಸದ್ಗುರು ಶರಣ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾರೆ. ಅಲ್ಲಿಂದ ಲೀಲಾವತಿ ಆಸ್ಪತ್ರೆ ಕೇವಲ 1.6 ಕಿ.ಮೀ. ದೂರ. ಮುಂಜಾನೆ ಕೇವಲ 5 ನಿಮಿಷಗಳಲ್ಲಿ ಆಸ್ಪತ್ರೆ ತಲುಪಬಹುದು. ಸರಿಯಾದ ಸಮಯಕ್ಕೆ ಆಟೋ ಸಿಕ್ಕಿದ್ದರಿಂದ ಅವರು ಆಸ್ಪತ್ರೆ ಸೇರಲು ಸಾಧ್ಯವಾಯಿತು.