ಮೈಸೂರು:- ಮೈಸೂರು ಇನ್ಫೋಸಿಸ್ ಆವರಣದಲ್ಲಿ ಕೊನೆಗೂ ಸಿಗದ ಚಿರತೆ ಸಿಗದ ಕಾರಣ 16 ದಿನಗಳ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ.
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನ ಆವರಣದಲ್ಲಿ ಡಿಸೆಂಬರ್ 31 ರಂದು ಚಿರತೆ ಕಾಣಿಸಿಕೊಂಡು ಸಂಸ್ಥೆಯ ಎಲ್ಲ ಸಿಬ್ಬಂದಿಯಲ್ಲಿ ಆತಂಕ ಹುಟ್ಟಿಸಿತ್ತು. ಚಿರತೆಯ ಓಡಾಟವನ್ನು ಸಿಸಿಟಿವಿಯಲ್ಲಿ ಕಂಡ ಸಿಬ್ಬಂದಿ ಹೌಹಾರಿದ್ದರು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಮೈಸೂರಿನಲ್ಲಿ ಇನ್ಫೋಸಿಸ್ ಕ್ಯಾಂಪಸ್ ಆವರಣ ಸುಮಾರು 300 ಎಕರೆಯಷ್ಟಿದೆ. ಇನ್ಫೋಸಿಸ್ನಲ್ಲಿ ಕೇವಲ ಕಟ್ಟಡಗಳು ಮಾತ್ರವಲ್ಲ ಖಾಲಿ ಪ್ರದೇಶ, ನೀರಿನ ಹೊಂಡಗಳು ಸಹ ಇವೆ. ಹೀಗಾಗಿ, ಇಲ್ಲಿ ಚಿರತೆ ಹುಡುಕುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬರೋಬ್ಬರಿ 70 ಜನರ ತಂಡ ರಚಿಸಿದ್ದರು. ಇನ್ಫೋಸಿಸ್ನ ಪ್ರತಿ ಮೂಲೆ ಮೂಲೆಯಲ್ಲೂ ಚಿರತೆಗಾಗಿ ಹುಡುಕಾಟ ನಡೆಸಿತ್ತು. ಟ್ರಾಪ್ ಕ್ಯಾಮೆರಾ, ಡ್ರೋನ್ ಕ್ಯಾಮೆರಾ ಇನ್ಫೋಸಿಸ್ಆವರಣದ ಸಿಸಿ ಕ್ಯಾಮರಾ ಸೇರಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿರತೆ ಸೆರೆಗೆ ತಂಡ ಮುಂದಾಗಿತ್ತು. ಚಿರತೆಯ ಹೆಜ್ಜೆ ಗುರುತುಗಳು ಸಹ ಅರಣ್ಯ ಇಲಾಖೆಯವರಿಗೆ ಸಿಕ್ಕಿಲ್ಲ. ಹೀಗಾಗಿ, ಚಿರತೆ ಪತ್ತೆ ಕಾರ್ಯಚರಣೆ ಸ್ಥಗಿತಗೊಳಿಸಿದ್ದಾರೆ ಎಂದು ಡಿಸಿಎಫ್ ಡಾ. ಬಸವರಾಜ್ ತಿಳಿಸಿದ್ದಾರೆ.