ಹಿಂದೂ ಸಂಪ್ರದಾಯದ ಪ್ರಕಾರ, ಸಾಮಾನ್ಯವಾಗಿ ಶುಭ ಕಾರ್ಯಗಳು, ಹಬ್ಬ-ಹರಿದಿನಗಳಲ್ಲಿ ಹೊಸ ಬಟ್ಟೆ ಧರಿಸೋ ಪದ್ಧತಿ ಇದೆ. ಯಾಕಂದ್ರೆ ಹೊಸ ಬಟ್ಟೆಗಳು ಸದಾ ಶುಭವನ್ನುಂಟು ಮಾಡುತ್ತವೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಜನರು ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಸುಂದರವಾದ ಮತ್ತು ಸೊಗಸಾದ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ.
ಹೊಸ ಬಟ್ಟೆಗಳನ್ನುಧರಿಸುವ ಮುನ್ನ ತೊಳೆಯಬೇಕೇ ಅಥವಾ ಹೊಸದಾಗಿರುವುದರಿಂದ ಹಾಗೆಯೇ ಧರಿಸಬಹುದಾ ಎಂಬುವುದರ ಬಗ್ಗೆ ಸಾಕಷ್ಟು ಮಂದಿಗೆ ಗೊಂದಲವಿದೆ. ನಿಮಗೂ ಸಹ ಇದೆ ಪ್ರಶ್ನೆಗಳು ಕಾಡುತ್ತಿದ್ದರೆ, ಇದಕ್ಕೆ ಉತ್ತರ ಹೊಸ ಬಟ್ಟೆಗಳನ್ನು ತೊಳೆದು ಧರಿಸುವುದೇ ಉತ್ತಮ ಎಂದು ತಜ್ಞರು ಹೇಳುತ್ತಾರೆ
ಆರೋಗ್ಯ ಮತ್ತು ಸುರಕ್ಷತೆಗಾಗಿ ಹೊಸ ಬಟ್ಟೆಗಳನ್ನು ಕಡ್ಡಾಯವಾಗಿ ತೊಳೆದು ಧರಿಸುವುದು ಉತ್ತಮ. ಏಕೆಂದರೆ ಹೊಸ ಬಟ್ಟೆಗಳನ್ನು ವಿವಿಧ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗಿರುತ್ತದೆ. ಬಣ್ಣ, ಸುಕ್ಕು ತಡೆಗಟ್ಟುವಿಕೆ ಮತ್ತು ಸ್ಟೇನ್ ತಡೆಗಟ್ಟುವಿಕೆಗಾಗಿ ವಿಶೇಷ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಹಾಗಾಗಿ ಅವುಗಳನ್ನು ದೀರ್ಘಕಾಲದವರೆಗೆ ಚರ್ಮದ ಸಂಪರ್ಕದಲ್ಲಿ ಇಡುವುದು ಒಳ್ಳೆಯದಲ್ಲ.
ಕೆಲವು ವಿಧದ ಬಣ್ಣಗಳು ಬಟ್ಟೆಗಳಿಗೆ ಬಲವಾಗಿ ಅಂಟಿಕೊಳ್ಳುವುದಿಲ್ಲ. ಇವು ಚರ್ಮಕ್ಕೆ ಅಂಟಿಕೊಳ್ಳುತ್ತವೆ. ಇವು ತುರಿಕೆ ಮತ್ತು ದದ್ದು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಬಟ್ಟೆಗಳನ್ನು ಒಗೆಯುವುದರಿಂದ ಆ ಬಣ್ಣಗಳನ್ನು ಕಡಿಮೆ ಆಗುತ್ತದೆ ಮತ್ತು ಚರ್ಮದ ಸಮಸ್ಯೆಗಳ ಅಪಾಯ ಸಹ ಕಡಿಮೆ ಆಗುತ್ತದೆ.
ಇದಲ್ಲದೇ, ಚರ್ಮಶಾಸ್ತ್ರಜ್ಞ ಡಾ. ಜೆಫ್ ಯು ಪ್ರಕಾರ, ಫಾರ್ಮಾಲ್ಡಿಹೈಡ್ ರಾಳವನ್ನು ಸುಕ್ಕು-ಮುಕ್ತ ಕಾಟನ್ ಶರ್ಟ್ ಮತ್ತು ಸಮವಸ್ತ್ರಗಳಲ್ಲಿ ಬಳಸಲಾಗುತ್ತದೆ. ಇದು ಕಾರ್ಸಿನೋಜೆನಿಕ್ ಎಂದು ತಿಳಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಇತರರು ಸಮವಸ್ತ್ರವನ್ನು ಸಂಪೂರ್ಣವಾಗಿ ತೊಳೆದು ಮಾತ್ರವೇ ಧರಿಸಬೇಕು
ನೀವು ಬಟ್ಟೆಗಳನ್ನು ಖರೀದಿಸುವ ಸ್ಥಳದ ಬಗ್ಗೆಯೂ ಗಮನ ಹರಿಸಬೇಕು. ಅಂಗಡಿಯಿಂದ ಖರೀದಿಸಿದ ಬಟ್ಟೆಗಳ ತಯಾರಿಕೆಗೆ ಕಡಿಮೆ ರಾಸಾಯನಿಕಗಳನ್ನು ಬಳಸಿರಬಹುದು. ಆದರೆ ಧೂಳು ಮತ್ತು ಅಂಗಡಿಯಲ್ಲಿ ಖರೀದಿಸಿದ ಸ್ಪ್ರೇಗಳು ಬಟ್ಟೆಯಲ್ಲಿ ಅಂಟಿಕೊಳ್ಳುವ ಸಾಧ್ಯತೆ ಇದೆ. ಗೊಂಬೆಗಳ ಹಾಕಿರುವ ಬಟ್ಟೆಗಳ ಮೇಲೆ ಸಾಕಷ್ಟು ಧೂಳು ಸಂಗ್ರಹವಾಗುತ್ತದೆ. ಸೆಕೆಂಡ್ ಹ್ಯಾಂಡ್ ಬಟ್ಟೆಗಳು ಅಲರ್ಜಿನ್ ಮತ್ತು ವಿವಿಧ ಸುಗಂಧ ದ್ರವ್ಯಗಳನ್ನು ಹೊಂದಿರುತ್ತವೆ. ಆದ್ದರಿಂದ ನೀವು ಬಟ್ಟೆಗಳನ್ನು ಎಲ್ಲಿಯೇ ಖರೀದಿಸಿದರೂ ಅದನ್ನು ಧರಿಸುವ ಮುನ್ನ ವಾಶ್ ಮಾಡುವುದನ್ನು ಮರೆಯಬೇಡಿ.
ಬಟ್ಟೆ ಒಗೆಯುವುದರಿಂದ ಕೆಲವು ರಾಸಾಯನಿಕಗಳು ಕಡಿಮೆಯಾಗುತ್ತವೆಯೋ ಹೊರತು, ಸಂಪೂರ್ಣವಾಗಿ ರಾಸಾಯನಿಕ ಅಂಶಗಳು ಹೋಗುವುದಿಲ್ಲ. ಏಕೆಂದರೆ ಪಾಲಿಯೆಸ್ಟರ್ನಂತಹ ಸಿಂಥೆಟಿಕ್ ಬಟ್ಟೆಗಳು ರಾಸಾಯನಿಕಗಳನ್ನು ಚೆನ್ನಾಗಿ ಹಿಡಿದಿಟ್ಟುಕೊಳ್ಳುತ್ತವೆ. ಇವು ತ್ವಚೆಗೆ ಬೇಗ ಅಂಟಿಕೊಳ್ಳದಿದ್ದರೂ ಕೆಲವರಿಗೆ ಕಿರಿಕಿರಿ ಉಂಟು ಮಾಡಬಹುದು.
ನಿಮಗೆ ಕೆಮಿಕಲ್ ಅಲರ್ಜಿ ಇದೆ ಎಂದೆನಿಸಿದರೆ, ತಕ್ಷಣವೇ ಪ್ಯಾಚ್ ಪರೀಕ್ಷೆಗಾಗಿ ಚರ್ಮಶಾಸ್ತ್ರಜ್ಞರನ್ನು ಭೇಟಿ ಮಾಡುವುದು ಉತ್ತಮ. ಕೆಲವೊಮ್ಮೆ ಒರಟಾದ ಬಟ್ಟೆಗಳು ಸಹ ಸೂಕ್ಷ್ಮ ಚರ್ಮವನ್ನು ಉಂಟು ಮಾಡಬಹುದು, ಇದನ್ನು ಅಲರ್ಜಿ ಎಂದು ನೀವು ತಪ್ಪಾಗಿ ಗ್ರಹಿಸಬಾರದು.
ಹೊಸ ಬಟ್ಟೆ ಒಗೆಯುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮೊದಲ ಬಾರಿಗೆ ಹೊಸ ಬಟ್ಟೆಗಳನ್ನು ತೊಳೆಯುತ್ತಿದ್ದರೆ, ಅದನ್ನು ಇತರ ಬಟ್ಟೆಗಳೊಂದಿಗೆ ಬೆರೆಸದೇ ಪ್ರತ್ಯೇಕವಾಗಿ ತೊಳೆಯಿರಿ. ಆದರೆ ಬಟ್ಟೆಯ ಲೇಬಲ್ನಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸಬೇಕು. ತಣ್ಣೀರಿನಲ್ಲಿ ಒಗೆಯುವುದರಿಂದ ಬಟ್ಟೆ ಹಾಳಾಗುವುದನ್ನು ತಡೆಯುತ್ತದೆ. ಲೇಬಲ್ನಲ್ಲಿ ‘ವಾಶ್ ವಿತ್ ಲೈಕ್ ಕಲರ್ಸ್’ ಎಂದು ಬರೆದಿದ್ದರೆ, ಬಟ್ಟೆಯು ಬಣ್ಣವನ್ನು ಬಿಡಬಹುದು ಎಂಬುವುದನ್ನು ಅರ್ಥಮಾಡಿಕೊಳ್ಳಬೇಕು.