ಧಾರವಾಡ: ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆಗೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ ಧಾರವಾಡ ತಾಲೂಕಿನ ದೇವಗಿರಿ ಗ್ರಾಮದಲ್ಲಿ ಸಂಭವಿಸಿದೆ.
ದೇವಗಿರಿ ಗ್ರಾಮದ ಸುಮಾರು 16 ಜನ ರೈತರಿಗೆ ಸೇರಿದ ಒಟ್ಟು 50 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿಗೆ ಬೆಂಕಿ ತಗುಲಿದೆ. ವಿದ್ಯುತ್ ತಂತಿಯ ಅವಘಡದಿಂದಾಗಿ ಈ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಊಹಿಸಲಾಗಿದೆ. ಇದು ವಿದ್ಯುತ್ ಅವಘಡದಿಂದಾಗಿಯೇ ಈ ಬೆಂಕಿ ಹೊತ್ತಿದೆಯಾ ಅಥವಾ ಬೇರೆ ಯಾವುದಾದರೂ ಕಾರಣದಿಂದ ಬೆಂಕಿ ಹೊತ್ತಿದೆಯಾ ಎಂಬುದು ಸ್ಪಷ್ಟವಾಗಿ ಗೊತ್ತಾಗಬೇಕಿದೆ. ಮಧ್ಯಾಹ್ನ ಏಕಾಏಕಿ ಕಬ್ಬಿನ ಜಮೀನಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಇದರಿಂದ ಸುಮಾರು 15-16 ಜನ ರೈತರು ಬೆಳೆದ ಕಬ್ಬು ಬೆಂಕಿಗೆ ಆಹುತಿಯಾಗಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರೂ ಸಹ ಭೇಟಿ ನೀಡಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.