ಸೃಜನ್ ಲೋಕೇಶ್ ಮಾತಿನ ಚಟಾಕಿಗೆ ನಗದವರು ಯಾರೂ ಕೂಡ ಇಲ್ಲ. ಸೃಜಾ ಮಜಾವನ್ನು ನೋಡಿ ನಗಲು ದಿನಗಳು ಕೂಡ ಹತ್ತಿರವಾಗುತ್ತಿವೆ. ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಮಜಾ ಟಾಕೀಸ್ ಆರಂಭವಾಗಲಿದೆ. ಇದು ಕನ್ನಡದ ಬಿಗ್ ಕಾಮಿಡಿ ಶೋ ಆಗಿದ್ದು ಸೃಜನ್ ಲೋಕೇಶ್ ಇದರ ನೇತೃತ್ವ ವಹಿಸಲಿದ್ದಾರೆ. ಮಜಾ ಟಾಕೀಸ್ ಫೆಬ್ರವರಿ 1ಕ್ಕೆ ಆರಂಭವಾಗಲಿದ್ದು, ಈ ಬಾರಿ ತಂಡ ಹಿರಿದಾಗಿದೆ.
ಕಲರ್ಸ್ ಕನ್ನಡ ಮಜಾ ಟಾಕೀಸ್ ಎರಡನೇ ಪ್ರೋಮೋ ಬಿಡುಗಡೆ ಮಾಡಿದೆ. ಅದ್ರಲ್ಲಿ ಕಲಾವಿದರ ಜೊತೆ ಯಾವಾಗಿನಿಂದ ಶೋ ಶುರುವಾಗುತ್ತೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಮಜಾ ಟಾಕೀಸ್ ಬರೋ ಫೆಬ್ರವರಿ ಒಂದರಿಂದ ಅದ್ಧೂರಿಯಾಗಿ ಆರಂಭವಾಗಲಿದೆ. ಸದ್ಯ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಬರ್ತಾ ಇದ್ರು. ಬಿಗ್ ಬಾಸ್ 11 ಫಿನಾಲೆ ಹಂತಕ್ಕೆ ಬಂದಿದೆ. ಜನವರಿ 25- 26ಕ್ಕೆ ಫಿನಾಲೆ ನಡೆಯುವ ಸಾಧ್ಯತೆ ಈಗ ಮತ್ತಷ್ಟು ದಟ್ಟವಾಗಿದೆ. ಬಿಗ್ ಬಾಸ್ ಮುಗಿಯುತ್ತಿದ್ದಂತೆ ಮಜಾ ಟಾಕೀಸ್ ಅಬ್ಬರ ಶುರುವಾಗಲಿದೆ.
ಟೀಂ ಜೊತೆ ಸಿದ್ಧವಾಗಿದೆ ಮಜಾ ಟಾಕೀಸ್ : ಸೃಜನ್ ಲೋಕೇಶ್ ಮಜಾ ಟಾಕೀಸ್ ಗೆ ಹೊಸ ತಂಡವೇ ಸೇರಿದೆ ಅಂದ್ರೆ ತಪ್ಪಾಗೋದಿಲ್ಲ. ಮಜಾ ಭಾರತ ವೇದಿಕೆ ಮೇಲೆ ಮಿಂಚಿದ್ದ ಅನೇಕ ಕಲಾವಿದರು ಈಗ ಮಜಾ ಟಾಕೀಸ್ ಭಾಗವಾಗ್ತಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಚಂದ್ರಿಕಾ ಆಗಿ ಮಿಂಚಿದ್ದ, ವಿಲನ್ ಪಾತ್ರದ ಮೂಲಕವೇ ಹೆಚ್ಚು ಪ್ರಸಿದ್ಧಿ ಪಡೆದಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಿಯಾಂಕಾ ಈ ಬಾರಿ ಮಜಾ ಟಾಕೀಸ್ ನಲ್ಲಿ ಮಜಾ ನೀಡಲಿದ್ದಾರೆ.
ಈ ಬಾರಿಯೂ ಕುರಿ ಪ್ರತಾಪ್ ಮಜಾ ಟಾಕೀಸ್ ತಂಡದಲ್ಲಿದ್ದಾರೆ. ತುಕಾಲಿ, ಶಿವು, ಪ್ರಿಯಾಂಕಾ ಕಾಮತ್ ಪಿಕೆ ಮತ್ತು ಚಂದ್ರಪ್ರಭ ಅವರನ್ನು ನೀವು ಮಜಾ ಟಾಕೀಸ್ ನಲ್ಲಿ ನೋಡ್ಬಹುದು. ಈ ಬಾರಿಯ ಮತ್ತೊಂದು ವಿಶೇಷ ಅಂದ್ರೆ ಭಟ್ರು. ಫುಲ್ ಮೆಂಟಲ್ ಎನ್ನುತ್ತಲೇ ಯೋಗರಾಜ್ ಭಟ್ರನ್ನು ತಂಡ ಎತ್ಕೊಂಡು ಹೋಗೋದನ್ನು ನೀವು ಪ್ರೋಮೋದಲ್ಲಿ ನೋಡ್ಬಹುದು.
ಈ ಬಾರಿ ಮಿಸ್ ಆದ ಕಲಾವಿದರು : ಮಜಾ ಟಾಕೀಸ್ ನಲ್ಲಿ ಈ ಬಾರಿ ಇಂದ್ರಜಿತ್ ಲಂಕೇಶ್ ಮಿಸ್ ಆಗಿದ್ದಾರೆ. ಪ್ರೋಮೋದಲ್ಲಿ ಲಂಕೇಶ್ ಕಾಣಿಸ್ತಿಲ್ಲ. ಇಂದ್ರಜಿತ್ ಲಂಕೇಶ್ ಜಾಗಕ್ಕೆ ಭಟ್ರು ಬರ್ತಿದ್ದಾರೆ. ಒನ್ ಆಂಡ್ ಒನ್ಲಿ ವರಲಕ್ಷ್ಮಿ ಇಲ್ಲ. ಇದು ಎಲ್ಲರಿಗೂ ತಿಳಿದಿರುವ ನೋವಿನ ಸಂಗತಿ. ಇನ್ನೊಂದ್ಕಡೆ ಸೃಜನ್ ಪತ್ನಿಯಾಗಿ ಕಾಣಿಸಿಕೊಳ್ತಿದ್ದ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ ಕೂಡ ಪ್ರೋಮೋದಲ್ಲಿ ಮಿಸ್ ಆಗಿದ್ದಾರೆ. ಮುದ್ದು ಸರೋಜಾ ಎಂದೇ ಪ್ರಸಿದ್ಧಿಯಾಗಿದ್ದ ಪವನ್, ಮಂಡ್ಯ ರಮೇಶ್ ಸೇರಿದಂತೆ ಕೆಲ ಕಲಾವಿದರು ಮಿಸ್ ಆಗಿದ್ದಾರೆ.
ಪ್ರೋಮೋ ನೋಡಿದ ವೀಕ್ಷಕರು ಖುಷಿಯಾಗಿದ್ದಾರೆ. ಹೊಸ ತಂಡದಿಂದ ಹೆಚ್ಚು ಮನರಂಜನೆ ಸಿಗುವ ಭರವಸೆ ಇದೆ ಎಂದು ವೀಕ್ಷಕರು ಹೇಳಿದ್ದಾರೆ. 2015ರಲ್ಲಿ ಶುರುವಾದ ಮಜಾ ಟಾಕೀಸ್, 10 ವರ್ಷ ಪೂರೈಸುವ ಸಂಭ್ರಮದಲ್ಲಿದೆ. ಸೃಜನ್ ಬೇರೆ ಶೋಗಳಲ್ಲಿ ಬ್ಯೂಸಿಯಿದ್ದ ಕಾರಣ ಅವರು ಮಜಾ ಟಾಕೀಸ್ ಗೆ ಬ್ರೇಕ್ ನೀಡಿದ್ದರು. ಕೆಲವೇ ಕೆಲವು ಸೀಸನ್ ಮಾತ್ರ ಪ್ರಸಾರವಾಗಿದ್ರೂ ಜನರು ಮಜಾ ಟಾಕೀಸ್ ಮಜವನ್ನು ಮರೆತಿಲ್ಲ. ಈಗ್ಲೂ ಶೋ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ.