ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟನೆಯ ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತ 2’ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಗಬೇಕಿತ್ತು. ಆದರೆ ನಿರ್ದೇಶಕರು ಹಾಗೂ ನಿರ್ಮಾಪಕರ ನಡುವಿನ ಭಿನ್ನಾಭಿಪ್ರಾಯದಿಂದ ಕೊನೆ ಘಳಿಗೆಯಲ್ಲಿ ಬಿಡುಗಡೆ ಕ್ಯಾನ್ಸಲ್ ಆಗಿತ್ತು. ಇದೀಗ ಸಿನಿಮಾ ಬಿಡುಗಡೆಗಿದ್ದ ತೊಡುಕು ನಿವಾರಣೆಯಾಗಿದ್ದು ಈ ಬಗ್ಗೆ ಚಿತ್ರತಂಡ ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡಿದೆ.
‘ಸಂಜು ವೆಡ್ಸ್ ಗೀತ 2’ ಸಿನಿಮಾ ಜನವರಿ 10ಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ತಡೆಯಾಜ್ಞೆ ತಂದಿದ್ದ ಕಾರಣಕ್ಕೆ ಸಿನಿಮಾ ಬಿಡುಗಡೆ ಆಗಲಿಲ್ಲ. ಸಿನಿಮಾದ ಮೇಲೆ ತಡೆಯಾಜ್ಞೆ ಬೀಳಲು ಕಾರಣ ಏನೆಂದು ವಿವರಿಸಿದ ನಾಗಶೇಖರ್, ‘ಗೆಳೆಯ ಭಾವನಾ ರವಿ ಜೊತೆ ಸೇರಿ ತೆಲುಗಿನಲ್ಲಿ ‘ಗುರ್ತುಂದಾ ಸೀತಾಕಾಲಂ’ ಹೆಸರಿನ ಸಿನಿಮಾ ಮಾಡಿದ್ದೆ. ಆ ಸಿನಿಮಾದ ಫೈನ್ಯಾನ್ಶಿಯರ್ ಈ ಕೇಸು ಹಾಕಿದ್ದರು. ‘ಸಂಜು ವೆಡ್ಸ್ ಗೀತಾ 2’ ನನ್ನದೇ ಬ್ಯಾನರ್ ಸಿನಿಮಾ ಎಂದುಕೊಂಡು ಅವರು ಕೇಸು ಹಾಕಿದ್ದರು. ಹಳೆಯ ವಿಡಿಯೋ ನೋಡಿ, ಅವರು ಇದು ನನ್ನ ಸಿನಿಮಾ ಅಂದುಕೊಂಡಿದ್ದರು ಹಾಗಾಗಿ ಸ್ಟೇ ತಂದಿದ್ದರು’ ಎಂದಿದ್ದಾರೆ.
ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ಬೀಳುತ್ತಿದ್ದಂತೆ ಕೆಲವರು ಕೆಲವು ರೀತಿ ಮಾತನಾಡುತ್ತಿದ್ದಾರೆ ಎಂದ ನಾಗಶೇಖರ್, ‘ನಿರ್ಮಾಪಕರು ಆರು ಕೋಟಿ ಬ್ಯಾಲೆನ್ಸ್ ಉಳಿಸಿಕೊಂಡಿದ್ದಾರೆ ಎಂದೆಲ್ಲ ಕೆಲವರು ಹೇಳುತ್ತಿದ್ದಾರೆ. ಆದರೆ ನಾವು ನ್ಯಾಯಾಲಯದಲ್ಲಿ ನಾಲ್ಕು ಕೋಟಿ ಶೂರಿಟಿ ಕೊಟ್ಟು ಸಿನಿಮಾದ ತಡೆ ಆಜ್ಞೆ ತೆರವು ಮಾಡಿಸಿದ್ದೀವಿ. ನಾಲ್ಕು ಕೋಟಿ ಕೊಟ್ಟವರಿಗೆ ಆರು ಕೋಟಿ ಹೆಚ್ಚಿನದಲ್ಲ. ಈ ಸಿನಿಮಾಕ್ಕೆ 15 ಕೋಟಿ ಬಂಡವಾಳ ಹಾಕಲಾಗಿದೆ. ಹಾಗಿರುವಾಗ ಇದೆಲ್ಲ ಬಹಳ ದೊಡ್ಡ ಮೊತ್ತ ಅಲ್ಲ. ಇಲ್ಲ ಸಲ್ಲದ ವಿಷಯಗಳನ್ನು ಸಿನಿಮಾದ ಬಗ್ಗೆ ಹಬ್ಬಿಸಬೇಡಿ’ ಎಂದು ಮನವಿ ಮಾಡಿದ್ದಾರೆ.
‘ಒಂದು ಮದ್ವೆ ಮಾಡಬೇಕಾದಾಗ ಎಷ್ಟು ವಿಘ್ನ ಬರುತ್ತೆ ಅಂತಾ ಗೊತ್ತಿದ್ದರೂ ಈ ಟೈಟಲ್ ಇಟ್ಟು ಸಿನಿಮಾ ಮಾಡಿದ್ದೀನಿ, ಸಿನಿಮಾ ಮಾಡುವಾಗ ಬೀದಿಲಿ ನಿಂತಿದ್ದೀನಿ. ಕಷ್ಟ ಪಟ್ಟಿದ್ದೀನಿ. ಆದರೆ ಸಂಜು ವೆಡ್ಸ್ ಗೀತಾ ಸಿನಿಮಾ ಕೊಟ್ಟ ಸಕ್ಸಸ್ ನಾ ಮರೆಯೊಲ್ಲ. ಈ ಸಿನಿಮಾ ಸಹ ಅದೇ ಯಶಸ್ಸು ಕೊಡುವ ನಿರೀಕ್ಷೆ ಇದೆ’ ಎಂದರು. ನಟ ಶ್ರೀನಗರ ಕಿಟ್ಟಿ ಮಾತನಾಡಿ, ‘ಸಂಜು ವೆಡ್ಸ್ ಗೀತಾ 2’ ಸಿನಿಮಾಕ್ಕೆ ತಡೆಯಾಜ್ಞೆ ದೊರೆಯುತ್ತಿದ್ದಂತೆ, ಕೆಲವರು ಕೆಲವು ರೀತಿ ಮಾತನಾಡಿ, ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಲು ಪ್ರಾರಂಭ ಮಾಡಿದ್ದಾರೆ. ದಯವಿಟ್ಟು ಹಾಗೆ ಮಾಡುವುದು ಬೇಡ ಎಂದು ಮನವಿ ಮಾಡಿದರು.